

ಚಾಮರಾಜನಗರ: ಸುಗಮ ಸಂಗೀತ ಪಠ್ಯವನ್ನು ವಿಶ್ವವಿದ್ಯಾನಿಲಯದಲ್ಲಿ ಅಳವಡಿಸಬೇಕು ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತು ರಾಜ್ಯಾಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಒತ್ತಾಯಿಸಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕ ವತಿಯಿಂದ ಭಾನುವಾರ ಆಯೋಜಿಸಿದ್ದ ಚಾಮರಾಜನಗರ ಜಿಲ್ಲಾ ಪ್ರಥಮ ಸುಗಮ ಸಂಗೀತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 18 ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನ ನಡೆದಿದ್ದು, 19ನೇ ಸಮ್ಮೇಳನ ಮಂಡ್ಯದಲ್ಲಿ ನಡೆಯಲ್ಲಿದ್ದು, ಮುಂದಿನ ಸಮ್ಮೇಳನ ನಡೆಯುವ ಮುನ್ನ ಸುಗಮ ಸಂಗೀತ ಪಠ್ಯವನ್ನು ವಿಶ್ವವಿದ್ಯಾನಿಲಯದಲ್ಲಿ ಅಳವಡಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಸಂಘ ಸಂಸ್ಥೆಗಳನ್ನು ಕಡೆಗಣಿಸುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರೆ ಕಾರ್ಯಕ್ರಮಕ್ಕೆ ಅನುದಾನವನ್ನು ಕಂತುಗಳ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಈ ಪ್ರವೃತ್ತಿಯನ್ನು ಕೈಬಿಡಬೇಕು ಸಾಂಸ್ಕೃತಿಕ ಸಂಘ ಸಂಸ್ಥೆಗಳನ್ನು ಗೌರವಿಸುವ ಕೆಲಸವನ್ನು ಮಾಡಬೇಕು ಎಂದರು.
ದೇಶದಲ್ಲಿ ಹಿಂದೂಸ್ತಾನಿ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಎಂಬ ಎರಡು ಪ್ರಕಾರದ ಸಂಗೀತಗಳನ್ನು ಗಮನಿಸಿದ್ದೇವೆ, ಸುಗಮ ಸಂಗೀತ ವಿಭಿನ್ನ ರೀತಿಯ ಸಂಗೀತವಾಗಿದೆ. ಸುಗಮ ಸಂಗೀತಕ್ಕೆ ಇತಿಹಾಸವಿದೆ.ಇತ್ತೀಚಿನ ದಿನಗಳಲ್ಲಿ ಸುಗಮ ಸಂಗೀತವನ್ನು ಲಘು ಸಂಗೀತ ಎಂದು ಆಕಾಶವಾಣಿಯಲ್ಲಿ ಕರೆಯಲಾಗುತ್ತಿದೆ ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷ, ಸುಗಮ ಸಂಗೀತ ಗಾಯಕ ಹಾಗೂ ಸಂಗೀತ ನಿರ್ದೇಶಕ ಸಿ.ವಿಶ್ವನಾಥ್ ಮಾತನಾಡಿ, ಪ್ರತಿಯೊಬ್ಬರು ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತದ ಮಿತಿಯನ್ನು ಮೊದಲು ಅರಿಯಬೇಕಾಗಿದೆ. ಈ ಹಿಂದೆ ಚಿತ್ರಸಂಗೀತದಲ್ಲೂ ಶಾಸ್ತ್ರೀಯ ಮಟ್ಟಗಳು ಸಂಯೋಜಿತವಾಗಿರುತ್ತಿದ್ದವು. ಸುಗಮ ಸಂಗೀತದ ವ್ಯಾಪ್ತಿಗೆ ಕೇವಲ ಕವಿಗಳ ಸಾಲುಗಳು ಮಾತ್ರವೇ ಬರುವುದಿಲ್ಲ. ವಚನ, ಕವಿಭಾವ, ದೇವರ ನಾಮ, ಗೀಗೀಪದ, ಗಮಕ ಎಲ್ಲವೂ ಸುಗಮಸಂಗೀತದ ಅಂಗಗಳೇ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಪರಿಷತ್ತು ರಾಜ್ಯ ಕಾರ್ಯಾಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ ಬಿ. ಬಸವರಾಜು, ಗೌರವಾಧ್ಯಕ್ಷ ಗಣೇಶ್ ದೀಕ್ಷಿತ್, ಕೆರಹಳ್ಳಿ ಮಹದೇವಸ್ವಾಮಿ, ಡೇವಿಡ್ ಪ್ರತಿಭಾಂಜಲಿ, ರಾಮಸಮುದ್ರ ರಾಜಪ್ಪ ಹಾಗೂ ಇತರರು ಹಾಜರಿದ್ದರು.