ಮಹಿಳೆಯರು ಉದ್ಯಮಿಗಳಾಗಲು ಉತ್ತೇಜಿಸಿ

23rajesh12
Published on

ಚಾಮರಾಜನಗರ: ಸ್ಥಳೀಯರು ಮತ್ತು ಮಹಿಳೆಯರಿಗೂ ಉದ್ಯಮಿಗಳಾಗಲು ಉತ್ತೇಜನ ಕೊಡಬೇಕು ಎಂದು ಅರ್ಥಶಾಸ್ತ್ರಜ್ಞ ಹಾಗೂ ಅಂಕಣಕಾರ ಆರ್.ಎಂ.ಚಿಂತಾಮಣಿ ಸಲಹೆ ನೀಡಿದರು.

ನಗರದ ಖಾಸಗಿ ರೆಸಾರ್ಟ್‌ನಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ಮತ್ತು ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಸ್ಥಾಪಿತವಾಗಿರುವ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ವಲಯ ನಿರೀಕ್ಷೆಗೂ ಮೀರಿ ಬೆಳವಣಿಗೆ ಆಗಿದೆ. ಆದರೆ ಇಲ್ಲಿ ಹೊರಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುತ್ತಿದ್ದಾರೆ. ಇದರ ತೆಗೆ ನಮ್ಮ ಜಿಲ್ಲೆಯವರು, ವಿಶೇಷವಾಗಿ ಮಹಿಳೆಯರಿಗೆ ಕೈಗಾರಿಕೆಗಳನ್ನು ಸ್ಥಾಪಿಸಲು ಸಂಸ್ಥೆ ಉತ್ತೇಜನ ನೀಡಬೇಕು ಎಂದರು.

ಮೂಡ್ಲುಪುರದ ಬಳಿ ಸಣ್ಣ ಕೈಗಾರಿಕಾ ವಲಯ ಬಹು ಹಿಂದೆಯೇ ಸ್ಥಾಪನೆಗೊಂಡಿದೆ. ಸ್ಥಳೀಯರು ಕಡೇ ಪಕ್ಷ ಮಧ್ಯಮವರ್ಗದ ಕೈಗಾರಿಕೆ, ಸಣ್ಣ ಕೈಗಾರಿಕೆ,ಅಥವಾ ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿ ಗೆಲ್ಲಬೇಕು. ಅರಿಶಿನ ಮುಂತಾದ ವಾಣಿಜ್ಯ ಬೆಳೆಗಳ ಮೌಲ್ಯ ವರ್ಧಿತ ಕೈಗಾರಿಕಾ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಹಿಂದುಸ್ತಾನ್ ಲಿವರ್‌ನಂತಹ ಬಹುರಾಷ್ಟ್ರೀಯ ಕಂಪನಿಗಳು ಪ್ಯಾಕೇಜ್ಡ್ ಹಿಟ್ಟುಗಳನ್ನು ಮಾರುಕಟ್ಟೆಗೆ ಬಿಟ್ಟು ಸಫಲರಾಗಿದ್ದಾರೆ. ಈ ಕ್ಷೇತ್ರದಲ್ಲಿ ಬಹಳಷ್ಟು ಬೇಡಿಕೆ ಇದೆ ಎಂದು ತಿಳಿಸಿದರು.

ಎಫ್‌ಕೆಸಿಸಿಐ ಅಧ್ಯಕ್ಷ ಹಾಗೂ ಮುಖ್ಯ ಅತಿಥಿ ಆರ್.ಶಿವಕುಮಾರ್ ಮಾತನಾಡಿ, ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ವಲಯ ಮತ್ತಷ್ಟು ಅಭಿವೃದ್ಧಿ ಕಾಣಬೇಕಾದರೆ ಉತ್ತಮ ರಸ್ತೆಗಳು ನಿರ್ಮಾಣವಾಗಬೇಕು. ಲಾರಿಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಪೋಲಿಸ್ ಉಪಠಾಣೆ, ಅಗ್ನಿಶಾಮಕ ಠಾಣೆ, ರಸ್ತೆ ಬದಿ ವಿದ್ಯುತ್ ದೀಪಗಳು, ರೈಲ್ವೆ ಸಂಪರ್ಕ ಕಲ್ಪಿಸಬೇಕು. ನೀರು,ವಿದ್ಯುಚ್ಛಕ್ತಿ ನಿರಂತರವಾಗಿರಬೇಕು. ಉದ್ಯಮಿಗಳಿಗೆ ಬ್ಯಾಂಕುಗಳು ಫೈನಾನ್ಸ್ ಒದಗಿಸಬೇಕು. ಮಹಿಳಾ ಉದ್ಯಮಿಗಳಿಗೆ ಉತ್ತೇಜನ ದೊರಕಬೇಕು ಎಂದು ಹೇಳಿದರು.

ಈ ವೇಳೆ ನೂತನ ನಗರಸಭಾ ಸದಸ್ಯ ಸುರೇಶ್ ನಾಯಕ, ಮಹಿಳಾ ಉದ್ಯಮಿ ವರ್ಷಾ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಬ್ರಹಾಮ್ ಡಿ’ ಸಿಲ್ವ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಲಾರಿ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಪ್ರಸಾದ್, ಸಂಘದ ಅಧ್ಯಕ್ಷ ವಿ.ಪ್ರಭಾಕರ್, ಪ್ರದಾನ ಕಾರ್ಯದರ್ಶಿ ಎನ್.ಪ್ರಸಾದ್, ಖಜಾಂಚಿ ಸಿ.ಎ.ನಾರಾಯಣ್,ಜಂಟಿ ಕಾರ್ಯದರ್ಶಿ ಎಲ್. ಸುರೇಶ್ , ಜಿ.ಆರ್.ಅಶ್ವತ್ಥ ನಾರಾಯಣ್, ಸಿ.ವಿ.ಶ್ರೀನಿವಾಸ ಶೆಟ್ಟಿ, ಉಪಾಧ್ಯಕ್ಷ ಬಿ.ಕೆ.ಪ್ರಕಾಶ್, ಸಂಚಾಲಕ ಪ್ರಕಾಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net