ಪಿಎಸಿಸಿ ಬ್ಯಾಂಕ್‌ನಲ್ಲಿ ಚಿನ್ನದ ಮೇಲೆ ಸಾಲಸೌಲಭ್ಯ

Published on

ಚಾಮರಾಜನಗರ : ಹೊನ್ನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ವತಿಯಿಂದ ಮುಂದಿನ ದಿನಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲಸೌಲಭ್ಯ ಒದಗಿಸಲು ಚಿಂತಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ.ವೃಷಭೇಂದ್ರಪ್ಪ ತಿಳಿಸಿದರು.

ತಾಲೂಕಿನ ಹೊನ್ನಹಳ್ಳಿ ಗ್ರಾಮದ ಬ್ಯಾಂಕ್‌ನ ಕಚೇರಿಯ ಆವರಣದಲ್ಲಿ ಇತ್ತೀಚೆಗೆ ನಡೆದ ಬ್ಯಾಂಕ್‌ನ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಹೊನ್ನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಕಟ್ಟಡ ನಿರ್ಮಾಣ ಮಾಡುವ ಗುರಿಹೊಂದಲಾಗಿದ್ದು, ಈಗಾಗಲೇ 20 ಗುಂಟೆ ಜಾಗಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಬ್ಯಾಂಕ್ ವತಿಯಿಂದ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ವಾಹನ ಸಾಲಸೌಲಭ್ಯ ನೀಡಲಾಗಿದ್ದು, ಸಂಘದ ಪ್ರಾರಂಭವಾದ ದಿನಗಳಿಂದಲೂ ಲಾಭದತ್ತ ಸಾಗುತ್ತಿದೆ. ಉತ್ತಮ ಸಂಘವಾಗಿ ಹೊರಹೊಮ್ಮುತ್ತಿದೆ ಎಂದರು.

2023-24ನೇ ಸಾಲಿನಲ್ಲಿ 8.31 ಕೋಟಿ ರೂ.ಗಳ ದುಡಿಯುವ ಬಂಡವಾಳ ಮಾಡಿದ್ದು, 9.29ಲಕ್ಷ ರೂ.ಲಾಭಗಳಿಸಿದೆ. 2.15 ಕೋಟಿ ರೂ. ಬೆಳೆ ಸಾಲ, 77.25 ಲಕ್ಷ ರೂ. ವ್ಯಾಪಾರ ಸಾಲ ನೀಡಲಾಗಿದೆ. ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ರೈತರು ಸಕಾಲದಲ್ಲಿ ಮರುಪಾವತಿಸಿ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪ್ರಭು, ನಿರ್ದೇಶಕರಾದ ಎಲ್.ಪ್ರಕಾಶ್, ಶೇಖರಪ್ಪ, ದೊಡ್ಡಪ್ಪ, ಚಿಕ್ಕಕೂಸಯ್ಯ, ಬಸವಣ್ಣ, ರತ್ನಮ್ಮ, ಗಾಯಿತ್ರಿ ಮಹದೇವಸ್ವಾಮಿ, ಮುಖ್ಯಕಾರ್ಯನಿರ್ವಾಧಿಕಾರಿ ಮಹೇಶ್, ಗ್ರಾ.ಪಂ.ಅಧ್ಯಕ್ಷ ರವಿಕುಮಾರ್, ಮಾಜಿ ಅಧ್ಯಕ್ಷ ಮಲ್ಲೇಶ್, ಸಂಘದ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net