ಶಿಕ್ಷಕರ ದಿನಾಚರಣೆ ಅಂಗವಾಗಿ ಅದ್ಧೂರಿ ಮೆರವಣಿಗೆ

23rajesh9
Published on

ಚಾಮರಾಜನಗರ: ನಗರದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿ ಬಾಫುಲೆ ಭಾವಚಿತ್ರ ಮೆರವಣಿಗೆ ಡಿಡಿಪಿಐ ರಾಮಚಂದ್ರರಾಜೇ ಅರಸ್ ಚಾಲನೆ ನೀಡಿದರು.

ಬಳಿಕ ಅಲ್ಲಿಂದ ಸಾಗಿದ ಮೆರವಣಿಗೆ ಶ್ರೀ ಭುವನೇಶ್ವರಿ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಸ್ತೆ, ಸುಲ್ತಾನ್ ಷರೀಫ್ ವೃತ್ತ, ಸತ್ತಿ ರಸ್ತೆ ಮೂಲಕ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂತ್ಯವಾಯಿತು. ಡೊಳ್ಳುಕುಣಿತ ಕಲಾವಿದರು ಮೆರವಣಿಗೆಗೆ ಮೆರುಗು ನೀಡಿದರು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಬಿಳಿಯ ವಸ್ತ್ರಗಳನ್ನು ಧರಿಸಿ ಗಮನಸೆಳೆದರು.

ನಗೆಗಡಲಲ್ಲಿ ತೇಲಿದ ಶಿಕ್ಷಕರು:
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಪ್ರೊ.ಎಂ.ಕೃಷ್ಣೇಗೌಡ ಅವರ ಹಾಸ್ಯಭರಿತ ಮಾತುಗಳಿಗೆ ಶಿಕ್ಷಕರು ನಗೆಗಡಲಲ್ಲಿ ತೇಲಿದರು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ನಡೆಯುವ ಹಾಸ್ಯದ ಪ್ರಸಂಗಗಳನ್ನು ಹೇಳುವ ಮೂಲಕ ನೆರೆದ ಶಿಕ್ಷಕರನ್ನು ರಂಜಿಸಿದರು. ಭಾಷಣ ಮಕ್ತಾಯವಾದ ಬಳಿಕವೂ ಇನ್ನಷ್ಟು ಮಾತನಾಡುವಂತೆ ಕೃಷ್ಣೇಗೌಡ ಅವರನ್ನು ಶಿಕ್ಷಕ ವೃಂದ ಒತ್ತಾಯಿಸಿತು. ಬಳಿಕವೂ ಹಲವಾರು ಹಾಸ್ಯದ ತುಣುಕುಗಳನ್ನು ಹೇಳುವ ಮೂಲಕ ಶಿಕ್ಷಕರದಲ್ಲಿ ನಗೆ ಉತ್ಸಾಹ ತುಂಬಿದರು.

15 ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ:
ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾದ ಕೃಷ್ಣಮೂರ್ತಿ, ಮಮತ, ಮಣಿ, ಎಚ್.ಮಮತಾ, ಎನ್.ಶಂಕರ್ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಕರಾದ ಮಹದೇವಸ್ವಾಮಿ, ದೊಡ್ಡಬಸವಯ್ಯ, ಗೋವಿಂದ, ಮುರುಳಿರಾಜು, ಸುರೇಶ್ ಕುಮಾರ್ ಹಾಗೂ ಪ್ರೌಢಶಾಲಾ ಶಿಕ್ಷಕರಾದ ಸಿದ್ದರಾಜು, ರಂಗೇಗೌಡ, ಶಾಂತರಾಜು, ಡಾ.ಮಹೇಂದ್ರ, ಗುರುಮೂರ್ತಿ ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net