ಚಾಮರಾಜನಗರ: ಪ್ರಸ್ತುತ ಮಕ್ಕಳು ಮೊಬೈಲ್‌ಗಳನ್ನು ಅತಿಯಾಗಿ ಬಳಕೆ ಮಾಡುವ ಮೂಲಕ, ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಜ್ಞಾನದೀಪ ಪಬ್ಲಿಕ್ ಶಾಲೆ ಮುಖ್ಯಶಿಕ್ಷಕಿ ಜಯಲಕ್ಷ್ಮೀ ತಿಳಿಸಿದರು.
ತಾಲೂಕಿನ ಹರದನಹಳ್ಳಿ ಸಮೀಪದಲ್ಲಿರುವ ಜ್ಞಾನದೀಪ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಮೊಬೈಲ್ ಬಳಕೆ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳು ಮನೆಗಳಲ್ಲಿ ಮೊಬೈಲ್ ಅತಿಯಾಗಿ ಬಳಕೆ ಮಾಡುತ್ತಿದ್ದಾರೆ. ಮೊಬೈಲ್ ಕೊಡದೇ ಇದ್ದಲ್ಲಿ ಮಕ್ಕಳು ಊಟ, ತಿಂಡಿ ಮಾಡದೇ ಹಠಕ್ಕೆ ಬಿದ್ದಿರುತ್ತಾರೆ ಎಂದು ಹಲವಾರು ಪಾಲಕರು ಶಿಕ್ಷಕರಿಗೆ ದೂರನ್ನು ಹೇಳುತ್ತಾರೆ. ಈ ಬಗ್ಗೆ ಶಿಕ್ಷಕರು ಮೊಬೈಲ್ ಬಳಕೆಯ ದುಷ್ಪರಿಣಾಮದ ಕುರಿತು ಮಕ್ಕಳಿಗೆ ಹಲವಾರು ಬಾರಿ ತಿಳಿಸಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಈ ನಿಟ್ಟಿನಲ್ಲಿ ಈ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಮೊಬೈಲ್ ಅನ್ನಯ ಅತಿಯಾಗಿ ಬಳಸಿದಾಗ ಕಣ್ಣಿಗೆ ಹಾನಿಯಾಗುತ್ತದೆ ಎಂಬುದನ್ನು ಕಿರು ಚಿತ್ರದ ಮೂಲಕ ತಿಳಿಸಿಕೊಡಲಾಯಿತು. ಇದೇ ವೇಳೆ ಕಿರು ಚಿತ್ರವನ್ನು ವೀಕ್ಷಿಸಿದ ನಂತರ ಎಲ್ಲಾ ಮಕ್ಕಳು, ಇನ್ನು ಮುಂದೆ ಮೊಬೈಲ್ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಿ.ಜಯಲಲಿತಾ, ಕೆ.ಶ್ವೇತಾ, ಗಾಯತ್ರಿ, ಶೋಭಾ, ಸಿಂಧು, ವಿ.ಮೋನಿಕಾ, ಶಿವಮ್ಮ ಹಾಗೂ ಇತರರು ಹಾಜರಿದ್ದರು.