

ಚಾಮರಾಜನಗರ: ಜಿಲ್ಲೆಯಲ್ಲಿರುವ ಗ್ರಾಮೀಣ ಪ್ರದೇಶದ ಮಕ್ಕಳು ಅತ್ಯಂತ ಬುದ್ಧಿವಂತರಾಗಿದ್ದು, ಅವರಿಗೆ ಉತ್ತೇಜನ ನೀಡುವ ಮೂಲಕ ಅವರ ಗುರಿ ತಲುಪಲು ಶಿಕ್ಷಕರು ಸಹಕಾರಿಯಾಗಬೇಕು ಎಂದು ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು
.
ಪ್ರಸ್ತುತ ಶಿಕ್ಷಕರಿಗಿಂತಲೂ ಮಕ್ಕಳು ವೇಗವಾಗಿ ಕಲಿಯುತ್ತಿದ್ದಾರೆ. ಈ ಹಿಂದೆ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶವೇ ಇರಲಿಲ್ಲ. ಆದರೇ ಇಂದು ಕಡ್ಡಾಯವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಮಾಡಿದೆ. ಅದಾಗ್ಯೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕುರಿತು ಶಿಕ್ಷಕರು ಕೂಡ ಜವಬ್ದಾರಿವಹಿಸಬೇಕಿದೆ. ಪ್ರಾಮಾಣಿಕತೆಯಿಂದ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ಶಾಲೆಗಳಲ್ಲಿ ಇರುವ ಸೌಕರ್ಯಗಳನ್ನು ಉಪಯೋಗಿಸಿಕೊಂಡು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಬೇಕಿದೆ ಎಂದು ಕಿವಿಮಾತು ಹೇಳಿದರು.