

ಚಾಮರಾಜನಗರ: ನಗರದ ಸ್ವಚ್ಛತೆಯಲ್ಲಿ ಪ್ರಧಾನ ಪಾತ್ರವಹಿಸುವ ಪೌರಕಾರ್ಮಿಕರು ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಲಹೆ ನೀಡಿದರು.
ನಗರದ ನಗರಸಭಾ ಕಚೇರಿ ಮುಂಭಾಗ ನಗರಸಭೆ ವತಿಯಿಂದ ಪ್ರಥಮ ಬಾರಿಗೆ 40 ಮಂದಿ ಪೌರಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಮೈಸೂರಿನ ಅಪೋಲೊ ಆಸ್ಪತ್ರೆಗೆ ಕರೆದೊಯ್ದ ಬಸ್‌ಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ನಗರದ ಸ್ವಚ್ಛತೆಯಲ್ಲಿ ದಿನನಿತ್ಯ ತೊಡಗುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ವೇಳೆ ಅನೇಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಆದ್ದರಿಂದ ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಮೈಸೂರಿನ ಅಪೋಲೋ ಆಸ್ಪತ್ರೆಗೆ ಆರೋಗ್ಯ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ಕ್ರಮವಹಿಸಲಾಗಿದೆ. ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ನಿಗಾವಹಿಸಿ ಇಂತಹ ಉಚಿತ ಆರೋಗ್ಯ ತಪಾಸಣೆಗಳ ಲಾಭ ಪಡೆಯಬೇಕು ಎಂದರು.
ಕಳೆದ ಬಾರಿ ನಡೆದ ಪೌರಕಾರ್ಮಿಕರ ಕುಂದು-ಕೊರತೆ ಸಭೆಯಲ್ಲಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಡುವಂತೆ ಕೇಳಿಕೊಂಡಿದ್ದರು. ಪೌರಕಾರ್ಮಿಕರ ಆಶಯದಂತೆ ನಗರಸಭೆ ವತಿಯಿಂದ ಮೊದಲ ಬಾರಿಗೆ 40 ಪೌರಕಾರ್ಮಿಕರ ತಂಡವನ್ನು ಆರೋಗ್ಯ ತಪಾಸಣೆಗೆ ಕಳುಹಿಸಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಎಲ್ಲರೂ ಆರೋಗ್ಯವಂತರಾಗಿರಬೇಕು ಎಂದು ತಿಳಿಸಿದರು.
ನಗರಸಭಾ ಅಧ್ಯಕ್ಷ ಎಸ್.ಸುರೇಶ್ ನಾಯಕ್ ಮಾತನಾಡಿ, ನಗರವನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರ ಆರೋಗ್ಯ ಕಾಪಾಡಲು ನಗರಸಭೆ ಬದ್ಧವಾಗಿದೆ. ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು. ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭಾ ಉಪಾಧ್ಯಕ್ಷೆ ಮಮತ ಬಾಲಸುಬ್ರಹ್ಮಣ್ಯ, ಸದಸ್ಯ ಚಂದ್ರಶೇಖರ್, ಪೌರಾಯುಕ್ತ ಎಸ್.ವಿ.ರಾಮದಾಸ್, ಹಿರಿಯ ಆರೋಗ್ಯ ನಿರೀಕ್ಷಿಕ ಮಂಜುನಾಥ್, ಕಿರಿಯ ಆರೋಗ್ಯ ನಿರೀಕ್ಷಕಿ ಪುಷ್ಪಾ ಹಾಗೂ ಪೌರಕಾರ್ಮಿಕರು ಹಾಜರಿದ್ದರು.