ಶಿಕ್ಷಕ ವೃತ್ತಿ ತಾಯ್ತನದ ವಿಸ್ತರಣೆ

23rajesh6
Published on

ಚಾಮರಾಜನಗರ: ಶಿಕ್ಷಕ ವೃತ್ತಿ ಅತ್ಯಂತ ಗೌರವದಿಂದ ಕೂಡಿದ ಹುದ್ದೆಯಾಗಿದ್ದು, ಮಹಿಳಾ ಶಿಕ್ಷಕರಿಗೆ ತಾಯ್ತನದ ವಿಸ್ತರಣೆಯಾಗಿದೆ ಎಂದು ಸೆಂಟ್ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಚಿಂತಕ ಪ್ರೊ.ಎಂ.ಕೃಷ್ಣೇಗೌಡ ಬಣ್ಣಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಕರ ದಿನಾಚರಣೆ ದಿನ ನಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಾವು ಹೇಗೆ ಆಲೋಚನೆ ಮಾಡುತ್ತಿವೋ, ಆಗೇ ಬದುಕಬೇಕಿದೆ. ಇಡೀ ಸಮಾಜದಲ್ಲಿ ಹೆಚ್ಚು ಮಾತನಾಡಲು ಅವಕಾಶ ಇರುವುದು ಶಿಕ್ಷಕರಿಗೆ ಮಾತ್ರ. ಶಿಕ್ಷಕರು ತಮ್ಮ ನಂತರದ ತಲೆಮಾರನ್ನು ತಯಾರು ಮಾಡುತ್ತಿರುತ್ತಾರೆ. ಶಿಕ್ಷಕರು ಮಾತ್ರ ಎಲ್ಲರ ಮನಸ್ಸಿನಲ್ಲೂ ಬಹಳ ಕಾಲ ಉಳಿಯುತ್ತಾರೆ ಎಂದು ತಿಳಿಸಿದರು.

ಶಿಕ್ಷಕರು ತಮ್ಮನ್ನು ಸಮರ್ಪಿಸಿಕೊಂಡು ಬೋಧನೆ ಮಾಡದಿದ್ದರೆ ಜೀವಮಾನವಿಡೀ ಕಷ್ಟವಾಗುತ್ತದೆ. ಆಗಾಗಿ ಮಕ್ಕಳಿಗೆ ಪ್ರೀತಿಯಿಂದ ಬೋಧನೆ ಮಾಡಬೇಕಿದೆ. ಈ ದೇಶದ ಹಣೆಬರಹ ಶಾಲಾ ಕೊಠಡಿಗಳಲ್ಲಿ ನಿರ್ಧಾರವಾಗುತ್ತದೆ. ಶಾಲಾ ಕೊಠಡಿಗಳು ಹಾಳಾದರೇ ದೇಶಕ್ಕೆ ಭವಿಷ್ಯವಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಕರ ಜವಾಬ್ದಾರಿ ಬಹುಮುಖ್ಯವಾಗಿದೆ. ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕ್ರಾಂತಿಯಾಗಿದೆ. ನಾವು ಗ್ರಹಿಸುವುದಕ್ಕಿಂತ ವೇಗವಾಗಿ ಜಗತ್ತು ಬದಲಾಗುತ್ತಿದೆ. ಮಕ್ಕಳನ್ನು ಅದಕ್ಕೆ ಒಂದುಕೊಳ್ಳುವ ನಿಟ್ಟಿನಲ್ಲಿ ತಯಾರು ಮಾಡಬೇಕಿದೆ ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಇರುವಂತಹ ಗೌರವ ಯಾರಿಗೂ ಸಿಗುವುದಿಲ್ಲ. ಶಿಕ್ಷಕರು ಕರುಣೆ, ಸಹಾನುಭೂತಿಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಹಿಳಾ ಶಿಕ್ಷಕರಿಗೆ ಸಹನೆ ಮತ್ತು ತಾಳ್ಮೆ ಇರುತ್ತದೆ. ಸೂಕ್ಷ್ಮವಾಗಿ ವಿದ್ಯಾರ್ಥಿಗಳನ್ನು ಗಮನಿಸುತ್ತಾ ಹೋಗುತ್ತಾರೆ. ಆಗಾಗಿ ಮಹಿಳೆಯರಿಗೆ ಶಿಕ್ಷಕ ವೃತ್ತಿ ತಾಯ್ತನದ ವಿಸ್ತರಣೆಯಾಗಿದೆ. ನನ್ನ ವಿದ್ಯಾರ್ಥಿಗಳು ಉದ್ಧಾರವಾಗದೇ, ನಮ್ಮ ಉದ್ಧಾರ ಸಾಧ್ಯವಿಲ್ಲ ಎಂಬ ಶಿಕ್ಷಕರ ಅವಶ್ಯಕತೆ ಸಮಾಜಕ್ಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಶೆಟ್ಟಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ನಗರಸಭೆ ಅಧ್ಯಕ್ಷ ಸುರೇಶ್ ನಾಯಕ, ಉಪಾಧ್ಯಕ್ಷೆ ಮಮತಾ ಬಾಲಸುಬ್ರಹ್ಮಣ್ಯಂ, ಸದಸ್ಯ ಎಂ.ಮಹೇಶ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್, ಡಯಟ್ ಪ್ರಾಂಶುಪಾಲ ಎಂ.ಕಾಶೀನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಹನುಮಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net