

ಚಾಮರಾಜನಗರ: ಮುಚ್ಚಿದ ಹಣಕಾಸು ಸಂಸ್ಥೆಗಳಿಂದ ಠೇವಣಿದಾರರಿಗೆ ಹಣವನ್ನು ಬೇಗ ಠೇವಣಿ ಹಣವನ್ನು ವಾಪಸ್ ನೀಡಬೇಕೆಂದು ವಂಚನೆ ಸಂತ್ರಸ್ತ ಠೇವಣಿದಾರ ಕುಟುಂಬ ಸಂಘಟನೆಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಜನರಿಂದ ಹಣ ಕಟ್ಟಿಸಿಕೊಂಡು ವಾಪಸ್ ನೀಡದೆ ಮುಚ್ಚಿ ಹೋಗಿರುವ ಕಂಪನಿಗಳು, ಸೊಸೈಟಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪಾವತಿ ಖಾತರಿ ಹಕ್ಕುಗಳ ಕಾನೂನು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ-2019ರಂತೆ ಪ್ರತಿಯೊಬ್ಬ ವಂಚನೆಗೊಳಗಾದ ಹೂಡಿಕೆದಾರರ ಠೇವಣಿಯ ಎರಡರಿಂದ ಮೂರು ಪಟ್ಟು ತಕ್ಷಣವೇ ಪಾವತಿಸಬೇಕು. ನಿರುದ್ಯೋಗಿ ಏಜೆಂಟರಿಗೆ ಭದ್ರತೆ, ಗೌರವ, ಉದ್ಯೋಗ ಮತ್ತು ಪುನರ್ವಸತಿ ಹಕ್ಕನ್ನು ನೀಡಬೇಕು ಎಂದು ಆಗ್ರಹಿಸಿದರು.
ಅನಿಯಮಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 219ರ ಅಡಿಯಲ್ಲಿ ಅನಿಯಮಿತ ಠೇವಣಿ ಮತ್ತು ನಿಯಮಿತ ಠೇವಣಿ ಯೋಜನೆಗಳಲ್ಲಿ ಸಾರ್ವಜನಿಕರ ಠೇವಣಿಗಳ ಮರುಪಾವತಿಗಾಗಿ ದೇಶದ ಪ್ರತಿ ಜಿಲ್ಲೆಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಮತ್ತು ಪಾವತಿಗಳನ್ನು ಮಾಡಲು ಕಾಗದದ ಮೇಲೆ ಪಾವತಿ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಈ ಅರ್ಜಿಗಳನ್ನು ಪರಿಶೀಲಿಸಿ ತಕ್ಷಣ ಠೇವಣಿದಾರರಿಗೆ ಹಣ ವಾಪಸ್ ಕೊಡಿಸಬೇಕೆಂದು ಎಂದು ಒತ್ತಾಯಿಸಿದರು.
ವಂಚನೆಗೊಳಗಾದ ಪಾವತಿ ಪರಿಹಾರ ಮತ್ತು ಏಜೆಂಟ್‌ಗಳಿಗೆ ಯಾವುದೇ ವಿಳಂಬವಿಲ್ಲದೆ ಗೌರವ ಮತ್ತು ನ್ಯಾಯವನ್ನು ಒದಗಿಸಿಕೊಡಬೇಕೆಂದು ಕೇಳಿಕೊಂಡರು. ಈ ವೇಳೆ ಕೊಳ್ಳೇಗಾಲ ತಾಲೂಕಿನ ಮುಡಿಗುಂಡದ ಕೆಂಪಮ್ಮ ಮಾತನಾಡಿ, ನಾನು ಪಿಎಸಿಎಲ್‌ನ ಏಜೆಂಟ್ ಆಗಿದ್ದೆ. ಜನರಿಂದ ಹಣ ಕಟ್ಟಿಸಿದ್ದೆ. ಸಂಸ್ಥೆ ಮುಚ್ಚಿಹೋಗಿದ್ದರಿಂದ ನಾನು ಇಕ್ಕಟ್ಟಿಗೆ ಸಿಲುಕೊಂಡಿದ್ದೇನೆ. ಮಗನಿಗೆ ಮದುವೆ ಮಾಡುತ್ತಿದ್ದೇನೆ. ಇದನ್ನು ನೋಡಿದ ಜನರು ನಮ್ಮ ಹಣದಲ್ಲಿ ಮದುವೆ ಮಾಡುತ್ತಿದ್ದಾಳೆ ಎಂದು ಬೈಯ್ಯುತ್ತಿದ್ದಾರೆ. ಇವರನ್ನು ಊರನ್ನೇ ಬಿಟ್ಟು ಓಡಿಸಬೇಕು ಎನ್ನುವ ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ಕೊಳ್ಳೇಗಾಲ ತಾಲೂಕಿನಲ್ಲಿರುವ ಸಂಸ್ಥೆಯ ಸೀನಿಯರ್‌ಗಳು ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲ. ನಾವೆಲ್ಲರೂ ಒಗ್ಗೂಡಿ ಹೋರಾಟ ಮಾಡಿ ಠೇವಣಿ ಹಣವನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಸಿ.ಸೋಮಣ್ಣ, ಉಪಾಧ್ಯಕ್ಷ ವೆಂಕಟೇಶ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ನಂಜುಂಡಸ್ವಾಮಿ, ಚಾಮರಾಜನಗರ-ಮೈಸೂರು ಜಿಲ್ಲೆಗಳ ಗೌರವಾಧ್ಯಕ್ಷ ಎಚ್.ಎಸ್.ಮೃತ್ಯುಂಜಯ, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಮಹೇಶ್, ಮೈಸೂರು ಜಿಲ್ಲಾಧ್ಯಕ್ಷ ಅಲ್ಲಾಬಕಾಸ್, ಪಾರ್ವತಮ್ಮ ಮತ್ತು ಇತರರು ಭಾಗವಹಿಸಿದ್ದರು.