ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

24rajesh13
Published on

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆಯನ್ನು ಹೈಕೋರ್ಟ್ ಎತ್ತಿಹಿಡಿದಿದ್ದು, ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದ ಉದ್ಯಾನವನದ ಬಳಿ ಜಮಾಯಿಸಿದ ಪ್ರತಿಭಟನಕಾರರು, ಅಲ್ಲಿಂದ ಮೆರವಣಿಗೆ ಮೂಲಕ ಶ್ರೀಭವನೇಶ್ವರಿವೃತ್ತಕ್ಕೆ ತೆರಳಿ, ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು ಮಾತನಾಡಿ, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಸ್ತಕ್ಷೇಪವಿದೆ ಎಂದು ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದರು. ಈ ಅನುಮತಿಯನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಯನ್ನು ಎದುರಿಸಬೇಕು ಎಂದು ಒತ್ತಾಯಿಸಿದರು.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಬೆಂಗಳೂರಿನಿಂದ ಮೈಸೂರಿನ ವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಮೈಸೂರಿನಲ್ಲಿ ಬೃಹತ್ ಸಮಾವೇಶವನ್ನು ನಡೆಸಲಾಗಿತ್ತು. ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷ ನಾಯಕರಾಗಿದ್ದಾಗ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ಆಗಾಗಿ ತನಿಖೆ ಉತ್ತಮ ರೀತಿಯಲ್ಲಿ ನಡೆಯಬೇಕಾದರೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಗರಸಭಾ ಅಧ್ಯಕ್ಷ ಸುರೇಶ್ ನಾಯಕ, ಸದಸ್ಯರಾದ ಶಿವರಾಜ್, ಮುಖಂಡ ಅರಕಲವಾಡಿ ನಾಗೇಂದ್ರ, ಚುಡಾ ಮಾಜಿ ಅಧ್ಯಕ್ಷರಾದ ಬಾಲಸುಬ್ರಮ್ಮಣ್ಯಂ, ಶಾಂತಮೂರ್ತಿ ಕುಲಗಾಣ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡಹಳ್ಳಿ ಮೂರ್ತಿ, ಪ್ರಧಾನ ಕಾರ್ಯದರ್ಶಿ ಮುತ್ತಿಗೆ ಮೂರ್ತಿ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ, ವಿರಾಟ್ ಶಿವು, ಚಂದ್ರು ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net