‘ಸಾವಿನ ಮನೆ’ಯಾದ ‘ಬಿಆರ್‌ಟಿ’

24rajesh6
Published on

ಚಾಮರಾಜನಗರ: ಜೀವ ವೈವಿಧ್ಯತೆಯ ತಾಣವಾಗಿರುವ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ(ಬಿಆರ್‌ಟಿ) ಒಂದರ ನಂತರ ಮತ್ತೊಂದು ವನ್ಯಜೀವಿ ಸಾವಿನ ಸುದ್ದಿ ಕೇಳಿಬರುತ್ತಲೇ ಇದೆ.

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವನ್ಯಜೀವಿಗಳ ಜೀವಕ್ಕೆ ಭದ್ರ ನೆಲೆ. ಆದರೆ 7 ತಿಂಗಳಲ್ಲಿ ಹುಲಿ, ಆನೆಗಳು, ಚಿರತೆಗಳು, ಕಡವೆ, ಜಿಂಕೆಗಳು ಮೃತಪಟ್ಟಿವೆ. ಇವುಗಳಲ್ಲಿ ಕೆಲವು ಪ್ರಾಣಿಗಳ ಸಾವು ಸ್ವಾಭಾವಿಕವಾಗಿದ್ದರೆ ಉಳಿದವುಗಳ ಸಾವು ಅಸ್ವಾಭಾವಿಕವಾಗಿದೆ. ಪ್ರಾಣಿಗಳ ಸಾವಿನ ತನಿಖೆಯನ್ನು ನಡೆಸುವ ಅರಣ್ಯ ಇಲಾಖೆ ಸ್ವಾಭಾವಿಕ ಸಾವನ್ನು ದೃಢಪಡಿಸಿದರೆ, ಬೇಟೆ, ಅಪಘಾತದಿಂದ ಅಸ್ವಾಭಾವಿಕ ಸಾವುಗಳೂ ಸಂಭವಿಸಿವೆ.

ಸ್ವಾಭಾವಿಕ ಸಾವು: ಮಾ.23ರಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ದೇಗುಲ ಅರಣ್ಯ ಪ್ರದೇಶದ ಕೆಂಕೆರೆ ಸಮೀಪ ಒಂದು ಹೆಣ್ಣಾನೆ ಮೃತಪಟ್ಟಿರುವುದು ಪತ್ತೆಯಾಗಿತ್ತು. ಜೂ.21ರಲ್ಲಿ ಬರಳ್ಳ ಅರಣ್ಯ ಪ್ರದೇಶದಲ್ಲಿ ಹೆಣ್ಣು ಹುಲಿಯ(5-6 ವರ್ಷ) ಮೃತದೇಹ ಸಿಕ್ಕಿತ್ತು. ಜು.8ರಲ್ಲಿ ದೊಡ್ಡಸಂಪಿಗೆ ಬಳಿ(ಮಂದಲಗೆರೆ ಅರಣ್ಯ ಪ್ರದೇಶ) ಹೆಣ್ಣಾನೆ ಮೃತದೇಹ ಕಂಡುಬಂದಿತ್ತು. ಆ.27ರಲ್ಲಿ ಯಳಂದೂರು ವನ್ಯಜೀವಿ ವಲಯದ ಆಳಶೆಟ್ಟಿಕಟ್ಟೆ ಮೂಲೆ ಎಂಬ ಅರಣ್ಯ ಪ್ರದೇಶದಲ್ಲಿ 40 ವರ್ಷದ ಗಂಡಾನೆ ಕಳೆಬರ ಪತ್ತೆಯಾಗಿತ್ತು. ಇದೇ ದಿನ ಬೈಲೂರು ವನ್ಯಜೀವಿ ವಲಯದ ಆಳದ ಕೆರೆ ಅರಣ್ಯ ಪ್ರದೇಶದಲ್ಲಿ ಆನೆಯ ಎರಡು ದಂತ ಮತ್ತು ತಲೆಬುರುಡೆ, ಮೂಳೆ ಕಾಣಿಸಿತ್ತು.
ಆ.31ರಲ್ಲಿ ಧೂಪದ ಮರದ ಹೊಡ್ಡು ಅರಣ್ಯಪ್ರದೇಶದಲ್ಲಿ ಆನೆ ಮೃತಪಟ್ಟಿತ್ತು. ಸೆ.15ರಲ್ಲಿ ಬಿದಿರು ಕೆರೆ ಅರಣ್ಯ ಪ್ರದೇಶದಲ್ಲಿ 50ರಿಂದ 60 ವರ್ಷದ ಹೆಣ್ಣಾನೆ ಮೃತ ದೇಹ ಸಿಕ್ಕಿತ್ತು. ಸೆ.19ರಲ್ಲಿ ಯಳಂದೂರು ವನ್ಯಜೀವಿ ವಲಯ ವ್ಯಾಪ್ತಿಯ ಮದ್ದೂರು ಗ್ರಾಮದ ಎಳೆಪಿಳ್ಳಾರಿ ದೇಗುಲದಿಂದ ಮಲ್ಲಿಗೆ ಹಳ್ಳಿಗೆ ಹೋಗುವ ಚಾನೆಲ್ ರಸ್ತೆಯಲ್ಲಿ ಗಂಡು ಚಿರತೆ ಮೃತಪಟ್ಟಿತ್ತು. ಸೆ.23ರಂದು ಚಾಮರಾಜನಗರ ಪ್ರಾದೇಶಿಕ ವಲಯ ವ್ಯಾಪ್ತಿಯ ವಡ್ಡರಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಹೆಣ್ಣು ಚಿರತೆ ಮೃತದೇಹ ಪತ್ತೆಯಾಗಿತ್ತು. ಇವುಗಳ ಸಾವು ಸ್ವಾಭಾವಿಕ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಅಸ್ವಾಭಾವಿಕ ಸಾವಿಗೆ ಕಾರಣರಾದವರಿಗೆ ಶಿಕ್ಷೆ: ಏ.23ರಲ್ಲಿ ಕೆ.ಗುಡಿ ವಲಯದ ಅಯ್ಯನಪುರ ಗಸ್ತಿನ ಹೊಸಕೆರೆ ಕಾಲುದಾರಿ ಬಳಿ ಉರುಳಿಗೆ ಸಿಲುಕಿ ಜಿಂಕೆ ಮತ್ತು ಹಸಿವಿನಿಂದ ಮರಿ ಜಿಂಕೆ ಮೃತಪಟ್ಟಿತ್ತು. ಈ ಪ್ರಕರಣದ ಸಂಬಂಧ ಕಾಳಿಕಾಂಬ ಕಾಲನಿಯ ಮಹದೇವೇಗೌಡ(42), ಮುಬಾರಕ್ ನನ್ನು(44) ಬಂಧಿಸಲಾಗಿತ್ತು.
ಏ.28ರಲ್ಲಿ ಬಿಆರ್‌ಟಿ ಕಾಡಿನ ಕೂಳಿಗುಂಡಿ ಅರಣ್ಯ ಪ್ರದೇಶದಲ್ಲಿ ಕಡವೆ ಚರ್ಮ ಸಾಗಿಸುತ್ತಿದ್ದ ಯರಕನಗದ್ದೆ ಪೋಡಿನ ಬಸವಣ್ಣ(38), ಬಂಗ್ಲೇಪೋಡಿನ ಕೇತೇಗೌಡನನ್ನು(45) ಸೆರೆ ಹಿಡಿಯಲಾಗಿತ್ತು. ಜೂ.2ರಂದು ಬಿಆರ್ ಹಿಲ್ಸ್-ಯಳಂದೂರು ರಸ್ತೆಯಲ್ಲಿ ಜೀಪ್ ಗುದ್ದಿದ ಪರಿಣಾಮ ಕಡವೆ ಮೃತಪಟ್ಟಿತ್ತು. ಈ ಪ್ರಕರಣದ ಸಂಬಂಧ ಜೀಪ್‌ನಲ್ಲಿದ್ದ ಶಿವಮೊಗ್ಗದ ಜಿ.ವರುಣ್(29), ಬೆಂಗಳೂರಿನ ಪ್ರಶಾಂತ್(30), ಅಂಕಿತ್ ಆರ್. ವೆರ್ಣೇಕರ್(32), ದಾವಣಗೆರೆಯ ಎಚ್.ಡಿ.ವಿವೇಕಾನಂದ(33) ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜೂ.6ರಲ್ಲಿ ಮದ್ದೂರು ವ್ಯಾಪ್ತಿಯ ಜಮೀನಿನ ಬೇಲಿಗೆ ವಿದ್ಯುತ್ ಹರಿಸಿದ್ದರಿಂದ ಕಡವೆ ಮೃತಪಟ್ಟಿತ್ತು. ಈ ಪ್ರಕಣದಲ್ಲಿ ಮೋಹನ್‌ಬಾಬುನನ್ನು(75) ಬಂಧಿಸಲಾಗಿತ್ತು. ಜು.19ರಂದು ಪುಣಜನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ(ಕಾರೇಪಾಳ್ಯ ಗಸ್ತಿನ ಮೂಲೆಹೊಳೆ ಅರಣ್ಯ ಪ್ರದೇಶ) ವಾಹನವೊಂದು ಗುದ್ದಿದ್ದ ಪರಿಣಾಮ ಜಿಂಕೆ ಮೃತಪಟ್ಟಿತ್ತು. ಬೆಂಗಳೂರಿನ ಎನ್.ವಿ.ಸುಹಾಸ್‌ನನ್ನು(32) ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ (ಗುಂಡುಹುಣಸೆ ಅರಣ್ಯ ಪ್ರದೇಶ) ಮತ್ತೊಂದು ಅಪಘಾತ ಪ್ರಕರಣದಲ್ಲಿ ಮತ್ತೊಂದು ಜಿಂಕೆ ಮೃತಪಟ್ಟಿತ್ತು. ಕೃತ್ಯವೆಸಗಿದ್ದ ಮಂಡ್ಯದ ರಾಚಪ್ಪಾಜಿಯನ್ನು(26) ಹಿಂಬಾಲಿಸಿ ಬಣ್ಣಾರಿ ಅಮ್ಮನ್ ಅರಣ್ಯ ತನಿಖಾ ಠಾಣೆಯ ಬಳಿ ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆ.30ರಲ್ಲಿ ಕೋಳಿಪಾಳ್ಯದಲ್ಲಿ ಜಿಂಕೆ ಮಾಂಸ ಮಾರುತ್ತಿದ್ದ ಖಚಿತ ಮಾಹಿತಿ ಮೇರೆಗೆ ಭಾಗ್ಯಭಾಯಿ, ಮತ್ತೋರ್ವ ಆರೋಪಿಯನ್ನು ಸೆರೆ ಹಿಡಿಯಲಾಗಿತ್ತು.

ಅತ್ತ ಪ್ರಾಣಿ, ಇತ್ತ ಮನುಷ್ಯರೂ ಬಲಿ
ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅತ್ತ ಪ್ರಾಣಿ, ಇತ್ತ ಮನುಷ್ಯರೂ ಬಲಿಯಾಗುತ್ತಿದ್ದಾರೆ. ೆ.29ರಲ್ಲಿ ಕರಳಕಟ್ಟೆ ಹಾಡಿ ಸಮೀಪದಲ್ಲಿ ಸಣ್ಣಮಾದ(71), ಮಾ.20ರಲ್ಲಿ ಕತ್ತೆಕಲ್ಲು ಪೋಡಿನ ನಿವಾಸಿ ಮಾದ(23), ಏ.4ರಲ್ಲಿ ಕುಳ್ಳೂರು ಗ್ರಾಮದ ಗಡಿಯಿಂದ ಅರಣ್ಯದೊಳಗೆ 1 ಕಿ.ಮೀ ದೂರದಲ್ಲಿ ಜಡೇಗೌಡ(56), ಏ.18ರಲ್ಲಿ ವಿಭೂತಿ ಗಣಿ ಅರಣ್ಯ ಪ್ರದೇಶದಲ್ಲಿ ಹೊಸಪೋಡು ನಿವಾಸದ ನಿವಾಸಿ ಈರ (61) ಕಾಡಾನೆ ದಾಳಿಗೆ ಮೃತಪಟ್ಟರು.

ಸಿಬ್ಬಂದಿಗೆ ನೋಟಿಸ್:
ಕಳೆದ ತಿಂಗಳು ಒಂದೇ ದಿನ ಎರಡು ಆನೆಗಳ ಕಳೇಬರ ಪತ್ತೆಯಾಗಿದ್ದವು. ಈ ಆನೆಗಳು ಬೇಟೆಗಾರಿಕೆಯಿಂದ ಸತ್ತಿದ್ದರೆ ದಂತಗಳು ಇರುತ್ತಿರಲಿಲ್ಲ. ಆದರೆ ಕಳೇಬರದಲ್ಲಿ ದಂತವೂ ಇತ್ತು. ಹೀಗಾಗಿ ಬೇಟೆಯ ಉದ್ದೇಶದಿಂದ ಬಲಿಯಾಗಿಲ್ಲ ಎನ್ನುವುದನ್ನು ಅರಣ್ಯ ಇಲಾಖೆ ತನಿಖೆ ವೇಳೆ ದೃಢಪಡಿಸಿಕೊಂಡಿದೆ. ಆನೆಗಳು ಮೃತಪಟ್ಟು ತುಂಬಾ ದಿನಗಳಾಗಿರುವ ಕಾರಣ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನೋಟಿಸ್ ನೀಡಲಾಗಿದೆ.

ಪ್ರಾಣಿಗಳ ಸ್ವಾಭಾವಿಕ ಸಾವು ಸಂಭವಿಸುತ್ತಲೇ ಇರುತ್ತವೆ. ಪ್ರಾಣಿ ಸತ್ತಾಗ ಅದರ ವರದಿ ಪಡೆದು, ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳುತ್ತೇವೆ. ಇತ್ತೀಚೆಗೆ ಹಸಿವಿನಿಂದ ಸತ್ತಿರುವ ಹೆಣ್ಣು ಚಿರತೆ 1 ವರ್ಷದ ಮರಿಯಾಗಿತ್ತು. ತಾಯಿಯಿಂದ ಮರಿಗಳು ಬೇಟೆಯಾಡುವ ಕೌಶಲ್ಯಗಳನ್ನು ಕಲಿಯುತ್ತವೆ. ತಾಯಿಯಿಂದ ಬೇರ್ಪಟ್ಟ ಮರಿ ಬೇಟೆಯಾಡಲು ಬಾರದೆ ಹಸಿವಿನಿಂದ ಮೃತಪಟ್ಟಿದೆ. ಎರಡು ಆನೆಗಳ ಸಾವಿನ ಪ್ರಕರಣದಲ್ಲಿ ಅಪರಾಧ ದೃಷ್ಟಿಕೋನದಿಂದ ಸಾವು ಸಂಭವಿಸಿಲ್ಲ. ಸಿಬ್ಬಂದಿ ತಾತ್ಸಾರ ಕಂಡುಬಂದ ಹಿನ್ನೆಲೆ ನೋಟಿಸ್ ನೀಡಲಾಗಿದೆ.ಶ್ರೀಪತಿ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನೂತನ ನಿರ್ದೇಶಕ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net