ಅದ್ಧೂರಿ ದಸರಾ ಆಚರಣೆಗೆ ಸೂಚನೆ

Published on

ಚಾಮರಾಜನಗರ: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಭಾಗವಾಗಿ ಜಿಲ್ಲೆಯಲ್ಲೂ ನಡೆಯುವ (ಅ.7 ರಿಂದ 9ರವರೆಗೆ) ಚಾಮರಾಜನಗರ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಆಚರಣೆ ಸಂಬಂಧ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ದೀಪಾಲಂಕಾರವನ್ನು ಹೆಚ್ಚು ಜನರನ್ನು ಸೆಳೆಯುವ ರೀತಿಯಲ್ಲಿ ಕೈಗೊಳ್ಳಬೇಕು ಎಂದರು.

ಎಂಎಸ್‌ಐಎಲ್ ಅಧ್ಯಕ್ಷರೂ ಆಗಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ವಿದ್ಯುತ್ ದೀಪಾಲಂಕಾರ ಎಲ್ಲಾ ಕಡೆಯಲ್ಲೂ ಇರಬೇಕು. ದೀಪಾಲಂಕಾರ ಹೆಚ್ಚು ಜನರ ಗಮನ ಸೆಳೆಯಲಿದೆ. ದಸರಾ ಹಬ್ಬದಲ್ಲಿ ವ್ಯಾಪಕವಾಗಿ ಎಲ್ಲಾ ಭಾಗಗಳಲ್ಲಿಯೂ ದೀಪಾಲಂಕಾರ ಇರುವಂತೆ ನೋಡಿಕೊಳ್ಳಬೇಕು ಎಂದರು.

ಸಂಸದ ಸುನೀಲ್ ಬೋಸ್ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಸಾಧನೆ ಬಗ್ಗೆ ದಸರಾ ಕಾರ್ಯಕ್ರಮಗಳಲ್ಲಿ ತಿಳಿಸಬೇಕು. ಸರ್ಕಾರದ ಕಾರ್ಯಕ್ರಮಗಳು ಹೆಚ್ಚು ಜನರಿಗೆ ತಲುಪುತ್ತಿರುವ ಬಗ್ಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಪ್ರಸ್ತುತ ಪಡಿಸಬೇಕು. ಇದಕ್ಕಾಗಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.

ಸಚಿವ ಕೆ.ವೆಂಕಟೇಶ್ ಮಾತನಾಡಿ, ಮೂರು ದಿನಗಳ ದಸರಾದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಮೂಡಿಬರಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು, ಫಲಪುಷ್ಪ ಪ್ರದರ್ಶನ, ಮಹಿಳಾ ದಸರಾ, ರೈತ ದಸರಾ, ಯುವ ಸಂಭ್ರಮ, ಗ್ರಾಮೀಣ ಕ್ರೀಡಾಕೂಟ, ಮ್ಯಾರಾಥಾನ್, ಪಾರಂಪರಿಕ ನಡಿಗೆ ಹೀಗೆ ಎಲ್ಲ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಆಯೋಜಿತವಾಗಬೇಕು. ಇದಕ್ಕಾಗಿ ನಿಯೋಜಿತರಾಗಿರುವ ವಿವಿಧ ಸಮಿತಿಗಳಲ್ಲಿರುವ ಅಧಿಕಾರಿಗಳು ಪರಿಪೂರ್ಣ ಸಿದ್ದತೆ ಮಾಡಬೇಕೆಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಅಗತ್ಯ ಸೂಚನೆ ನೀಡಲಾಗಿದೆ. ಯುವ ಸಂಭ್ರಮ, ದಸರಾ ಕ್ರಿಕೆಟ್ ಕಪ್, ಗ್ರಾಮೀಣ ಕ್ರೀಡಾಕೂಟದಂತಹ ವಿಶೇಷ ಕಾರ್ಯಕ್ರಮಗಳನ್ನು ಈ ಬಾರಿ ನಡೆಸಲಾಗುತ್ತಿದೆ. ವೈವಿಧ್ಯಮಯ ಕಾರ್ಯಕ್ರಮನಗಳನ್ನು ಪ್ರಸುತ್ತ ಪಡಿಸಲು ರೂಪುರೇಷೆ ತಯಾರಿಸಿದ್ದು ಸಮಿತಿಗಳು ಕಾರ್ಯೋನ್ಮುಖವಾಗಿವೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ, ದಸರಾ ಹಿನ್ನೆಲೆಯಲ್ಲಿ ವಾಹನಗಳು ಮತ್ತು ಜನರ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಮೆರವಣಿಗೆ ಸಾಗುವ ಮಾರ್ಗಗಳು, ದೀಪಾಲಂಕಾರಗಳ ಮಾರ್ಗಗಳಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದರು.

ಶಾಸಕರಾದ ಎಚ್.ಎಂ.ಗಣೇಶ್ ಪ್ರಸಾದ್, ಸಿ.ಎನ್. ಮಂಜೇಗೌಡ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ, ನಗರಸಭೆ ಅಧ್ಯಕ್ಷ ಎಸ್. ಸುರೇಶ್, ಉಪಾಧ್ಯಕ್ಷೆ ಮಮತಾ ಬಾಲಸುಬ್ರಹ್ಮಣ್ಯಂ, ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್(ಮುನ್ನ)ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಬಿಆರ್‌ಟಿ ಅರಣ್ಯ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಬಿ.ಎಸ್.ಶ್ರೀಪತಿ, ಉಪವಿಭಾಗಾಧಿಕಾರಿ ಮಹೇಶ್ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net