ಕಾನೂನಿನ ಮುಂದೆ ಎಲ್ಲರೂ ಸಮಾನರು

23rajesh10
Published on

ಚಾಮರಾಜನಗರ: ಕಾನೂನಿನ ಮುಂದೆ ಎಲ್ಲರೂ ಸಮಾನರು. ಯಾರನ್ನೂ ತಾರತಮ್ಯದಿಂದ ನೋಡಲು ಸಾಧ್ಯವಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಹೇಳಿದರು.

ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸಮತಾ ಸೊಸೈಟಿ 15ನೇ ವರ್ಷದ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಲಿಂಗತ್ವ ಅಲ್ಪಸಂಖ್ಯಾತರು ಕೀಳರಿಮೆ ಬಿಡಬೇಕು. ನಿಮಗೆ ಎಲ್ಲ ಹಕ್ಕುಗಳೂ ಇವೆ. ಶಿಕ್ಷಣ ಪಡೆದುಕೊಳ್ಳಿ. ಉದ್ಯೋಗ ಮೀಸಲಾತಿಯೂ ಇದೆ. ನಿಮ್ಮಲ್ಲೇ ಕೆಲವರು ಅಧಿಕಾರಿಳಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ್ ಮಾತನಾಡಿ, ಹುಟ್ಟುತ್ತಲೇ ಯಾರೂ ಸಹ ಕೇಳಿಕೊಂಡು ಹುಟ್ಟುವುದಿಲ್ಲ. ಯಾವ ಲಿಂಗವಾದರೂ ಸರಿ ಸಮಾನತೆ ಇರಬೇಕು. ಸರ್ಕಾರದ ಮಟ್ಟದಲ್ಲಿ ಎಲ್ಲರೂ ಸಮಾನರು. ಕಾನೂನು ವ್ಯಾಪ್ತಿಯಲ್ಲಿ ಎಲ್ಲರೂ ಒಂದೇ. ಎಲ್ಲರ ರಕ್ತ ಒಂದೇ ಆಗಿರುವಾಗ ನಾವು ಬೇರೆಯವರನ್ನು ಕೀಳರಿಮೆಯಿಂದ ನೋಡಬಾರದು ಎಂದರು.
ಜಿಲ್ಲೆಯಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಆರೋಗ್ಯ ಸಧೃಡವಾಗಿದೆ. ಬೇರೆ ಕಡೆ ಹೆಚ್ಚಾಗಿದ್ದರೆ ಜಿಲ್ಲೆಯಲ್ಲಿ ಕಡಿಮೆ ಜನರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ನಿಮ್ಮೊಂದಿಗೆ ಆರೋಗ್ಯ ಇಲಾಖೆ ಇರಲಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಯಾವ ಇಲಾಖೆಗಳಿಂದ ಏನು ಪ್ರಯೋಜನ ಸಿಗಲಿದೆ ಎನ್ನುವುದನ್ನು ಸಮತಾ ಸೊಸೈಟಿ ತಿಳಿಸಿಕೊಡಲಿ. ಯೋಜನಾ ಬದ್ಧವಾಗಿ ಮುಂದುವರೆಯಿರಿ ಎಂದು ಸಲಹೆ ನೀಡಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ಕೀಳರಿಮೆ, ಭಯ ಪಡುವ ಅಗತ್ಯವಿಲ್ಲ. ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಮುಂದಿನ ಜನಾಂಗ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಎಸ್.ರವಿಕುಮಾರ್ ಮಾತನಾಡಿ, ನಮಗೆ ಸಮತಾ ಸೊಸೈಟಿಯೊಂದಿಗೆ ಉತ್ತಮ ಒಡನಾಟವಿದೆ. ಸ್ವಾತಂತ್ರ್ಯ, ಹಕ್ಕು ಎಲ್ಲರಿಗೂ ಇದೆ. ಸ್ವಾತಂತ್ರ್ಯವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ನಿಮ್ಮಲ್ಲೇ ಸಾಧನೆ ಮಾಡಿದವರು, ಪ್ರತಿಭಾವಂತರು ಇದ್ದಾರೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಡಾ.ರಾಜ್‌ಕುಮಾರ್ ರಂಗಮಂದಿರದವರೆಗೆ ಸಮತಾ ನಡೆ ಮೆರವಣಿಗೆ ನಡೆಯಿತು. ವೇದಿಕೆ ಕಾರ್ಯಕ್ರಮದ ಬಳಿಕ ಸಮತಾ ಸೊಸೈಟಿ ಸರ್ವ ಸದಸ್ಯರ ಸಭೆ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲೇ ಜಿಲ್ಲಾ ನ್ಯಾಯಾಧೀಶೆ ಬಿ.ಎಸ್.ಭಾರತಿ ಡಾ.ರಾಜ್‌ಕುಮಾರ್ ರಂಗಮಂದಿರಕ್ಕೆ ಭೇಟಿ ನೀಡಿ ಲಿಂಗತ್ವ ಅಲ್ಪಸಂಖ್ಯಾತರನ್ನು ಮಾತನಾಡಿಸಿ ಹೋದರು. ವೇದಿಕೆ ಕಾರ್ಯಕ್ರಮದಲ್ಲಿ ಮಹಾನಾಯಕ ಸಂಘಟನೆಯ ಸಂಸ್ಥಾಪಕ ಶಿವಕುಮಾರ್, ಚೈತನ್ಯ ಸಂಸ್ಥೆಯ ಭಾಗ್ಯಮ್ಮ, ರೈತ ಮುಖಂಡ ಮಹೇಶ್‌ಕುಮಾರ್, ರವಿಕುಮಾರ್ ಮತ್ತು ಸಮತಾ ಸೊಸೈಟಿ ಯೋಜನಾ ವ್ಯವಸ್ಥಾಪಕ ದೊಡ್ಡಸ್ವಾಮಿ, ಖಜಾಂಚಿ ಆರ್.ಪಿ.ಸಂತೋಷ್‌ಕುಮಾರ್, ಸಮಾಲೋಚಕರಾದ ರ್ಇಾನ್ ಪಾಷ, ವೆಂಕಟೇಶ್, ಸದಸ್ಯೆ ಪ್ರೇಮಾ ಮತ್ತು ಇತರರು ಹಾಜರಿದ್ದರು.

‘ತಲ್ಕಿ’ ನಾಟಕ ಪ್ರದರ್ಶನ:
55 ವರ್ಷ ಮೇಲ್ಪಟ್ಟ ಲಿಂಗತ್ವ ಅಲ್ಪಸಂಖ್ಯಾತರೇ ಅಭಿನಯಿಸಿರುವ ತಲ್ಕಿ ನಾಟಕ ಪ್ರದರ್ಶನ ನಡೆಯಿತು. ಪಯಣ ಸಂಸ್ಥೆಯ ವತಿಯಿಂದ ಈ ನಾಟಕ ಪ್ರದರ್ಶನ ಮಾಡಲಾಯಿತು. ಲಿಂಗತ್ವ ಅಲ್ಪಸಂಖ್ಯಾತರು ಕಲಾವಿದರಾಗಿ ಉತ್ತಮವಾಗಿ ಅಭಿನಯಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಿದರು. ಇದಕ್ಕೂ ಮುನ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಕುಣಿದು, ಹಾಡಿ ಸಂಭ್ರಮಿಸಿದರು.

ನಮ್ಮನ್ನು ನಮ್ಮಂತೆಯೇ ಒಪ್ಪುವ ಮನಸ್ಸು, ನಮ್ಮನ್ನೂ ಗುರುತಿಸಬೇಕು, ನಮಗೂ ಅಸ್ತಿತ್ವವಿದೆ. ಇದನ್ನು ತಿಳಿಸಿಕೊಡಲು ನಾವು ಸಮತಾ ಸೊಸೈಟಿ ಕಟ್ಟಿದೆವು. ನಮ್ಮದು ಸಾಮ್ಯತೆ ಇರುವ ಇರುವ ಸಂಸ್ಥೆಯಾಗಿದೆ.
ದೀಪಾ ಬುದ್ಧೆ, ಸಮತಾ ಸೊಸೈಟಿ ಅಧ್ಯಕ್ಷೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net