ನೀರಿಲ್ಲದೇ ಒಣಗುತ್ತಿದೆ ರೈತರ ಬೆಳೆಗಳು

23rajesh5
Published on

ಚಾಮರಾಜನಗರ: ಜಿಲ್ಲೆಯ ಹಲವು ಡ್ಯಾಂಗಳು ಹಾಗೂ ಕೆರೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿಲ್ಲದೇ ಬೆಳೆಗಳು ಒಣಗುತ್ತಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಜಿಲ್ಲೆಯಲ್ಲಿರುವ ಸುವರ್ಣಾವತಿ ಮತ್ತು ಚಿಕ್ಕಹೊಳೆ ಹಾಗೂ ಗುಂಡಾಲ್ ಜಲಾಶಯ ಕಾವೇರಿ ಜಲಾಶಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ. ಈ ಮುಖ್ಯವಾದ ಜಲಾಶಯಗಳು ಅಲ್ಲದೇ ಹಲವಾರು ಸಣ್ಣ-ಪುಟ್ಟ ಡ್ಯಾಂಗಳು ಹಾಗೂ ನೂರಾರು ಕೆರೆಗಳನ್ನು ನಂಬಿಕೊಂಡು ರೈತರು ವ್ಯವಸಾಯ ಮಾಡುತ್ತಿದ್ದಾರೆ. ಕೆಲವು ಡ್ಯಾಂಗಳಲ್ಲಿ ನೀರು ಭರ್ತಿಯಾಗಿದ್ದರೂ, ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸದ ಪರಿಣಾಮ ರೈತರ ಬೆಳೆಗಳು ಒಣಗುತ್ತಿದೆ. ರೈತರ ಜೀವನಾಡಿಯಾಗಿರುವ ಕೆರೆಗಳ ಅಭಿವೃದ್ಧಿ ಮಾಡದೇ, ಹೂಳು ತುಂಬಿಕೊಂಡು ಸಮರ್ಪಕವಾಗಿ ನೀರು ಸಂಗ್ರಹವಾಗುತ್ತಿಲ್ಲ. ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕಿನಲ್ಲಿ ಭಾಗಶಃ ಕಬಿನಿ ನಾಲೆಗಳ ನೀರನ್ನು ಅವಲಂಬಿಸಲಾಗಿದ್ದರೂ, ನಾಲೆಗಳ ಅಭಿವೃದ್ಧಿ ಮಾಡದ ಪರಿಣಾಮ ಸೂಕ್ತ ರೀತಿಯಲ್ಲಿ ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ.

ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಕೆರೆಗಳು ಹಾಗೂ ಕೆರೆಗಳಿಗೆ ನೀರು ತುಂಬುವ ಮೂಲದ ಪ್ರದೇಶಗಳು ಒತ್ತುವರಿಯಾಗಿರುವ ಪರಿಣಾಮ ಮಳೆಗಾಲದಲ್ಲಿ ಹೊರತುಪಡಿಸಿದರೇ, ಉಳಿದಂತೆ ಕೆರೆಗಳು ಭರ್ತಿಯಾಗುವುದಿಲ್ಲ. ಅದರಲ್ಲೂ ಹನೂರು ಭಾಗದ ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಹುಬ್ಬೆಹುಣಸೆ ಡ್ಯಾಂ ನಿರ್ಮಿಸಿ ಹಲವು ವರ್ಷಗಳೇ ಕಳೆದಿದ್ದು, ಆರಂಭದಲ್ಲಿ ನಾಲೆಗಳಿಗೆ ನೀರು ಹರಿಸಲಾಗಿತ್ತು. ಆದರೆ ಈ ಬಾರಿ ಡ್ಯಾಂ ಭರ್ತಿಯಾಗಿದ್ದರೂ ಕೂಡ ನಾಲೆಗಳ ದುರಸ್ತಿಯಿಂದಾಗಿ ನೀರು ಬಿಡುತ್ತಿಲ್ಲ. ಪರಿಣಾಮವಾಗಿ ಈ ಭಾಗದ ರೈತರಿಗೆ ಸಮಸ್ಯೆ ಉಂಟಾಗಿದೆ. ಈ ಸಂಬಂಧ ರೈತರು ಹಾಗೂ ಅಧಿಕಾರಿಗಳಿಂದ ಲೌಡ್‌ಸ್ಪೀಕರ್ ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

*ನೀರಾವರಿ ಇಲಾಖೆ ವೈಫಲ್ಯ
ಕೊಳ್ಳೇಗಾಲ ಭಾಗದ ಎಲ್ಲ ಕೆರೆಗಳು ಹೂಳು ತುಂಬಿಕೊಂಡು ಮೈದಾನದಂತೆ ಆಗಿದೆ. ಇದರಿಂದ ಮಳೆಗಾಲದಲ್ಲೂ ಸಮರ್ಪಕವಾಗಿ ನೀರು ತುಂಬುವುದಿಲ್ಲ. ಚಿಕ್ಕರಂಗನಾಥ ಕೆರೆಗೆ ಕಲುಷಿತ ನೀರನ್ನು ಬಿಡಲಾಗುತ್ತಿದೆ. ನೀರು ವಿಷಯುಕ್ತವಾಗಿ ಮಾರ್ಪಡುತ್ತಿದ್ದು, ಇದನ್ನು ಕೃಷಿಗೆ ಬಳಕೆ ಮಾಡದಂತಹ ಪರಿಸ್ಥಿತಿ ಇದೆ. ಸರ್ಕಾರ ಜಾರಿಗೆ ತಂದಿರುವ ಕೆರೆ ತುಂಬಿಸುವ ಯೋಜನೆ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇದಕ್ಕೆ ನೀರಾವರಿ ಇಲಾಖೆ ವೈಫಲ್ಯವೇ ಕಾರಣ ವಾಗಿದೆ. ಗುಂಡಾಲ್ ಜಲಾಶಯ ನೀರು ನಮ್ಮ ಭಾಗದ ರೈತರ ಉಪಯೋಗಕ್ಕೆ ಬರುತ್ತಿಲ್ಲ. ಕೆರೆಗಳಲ್ಲಿ ನೀರಿನ ಸಾಮರ್ಥ್ಯ ಕುಂದಿದ್ದು, ಅಂತರ್ಜಲವು ಹೆಚ್ಚುತ್ತಿಲ್ಲ. ಅರೇಪಾಳ್ಯ, ಪಾಳ್ಯ ಹೋಬಳಿ ಭಾಗದ ರೈತರ ಕೃಷಿಗೆ ನೀರಿಲ್ಲದಂತಾಗಿದೆ.
ಶ್ರೀ ಕಂಠಸ್ವಾಮಿ, ಕಾರ್ಯಾಧ್ಯಕ್ಷ, ಜಿಲ್ಲಾ ರೈತ ಸಂಘ.

*ಸಂಗ್ರಹಣಾ ಸಾಮರ್ಥ್ಯ ಕಡಿಮೆ
ಚಾಮರಾಜನಗರದಲ್ಲಿ ಅತೀ ಹೆಚ್ಚು ಭೂ ಭಾಗ ಅರಣ್ಯ ಪ್ರದೇಶದಿಂದ ಕೂಡಿದೆ. ಹಿಂದೆಲ್ಲ, ಒಂದು ಮಳೆ ಬಿದ್ದರೆ ಕೆರೆಗಳು ಭರ್ತಿ ಆಗುತ್ತಿದ್ದವು. ಅದರೆ, ಇದೀಗ ಆ ಪರಿಸ್ಥಿತಿ ಇಲ್ಲ. ಕೆರೆಗಳಿಗೆ ಬೆಟ್ಟಗುಡ್ಡಗಳ ನೀರು ಹರಿದು ಬರುತ್ತಿಲ್ಲ. ಕಾವೇರಿ ನದಿಗೆ ಹರಿದು ವ್ಯರ್ಥವಾಗುತ್ತಿದೆ. ಇದರ ಹಿಂದೆ, ನೀರಾವರಿ ಇಲಾಖೆಯ ನೀರ್ಲಕ್ಷ್ಯವಿದೆ. ಇನ್ನು ಕೊಳ್ಳೇಗಾಲ ವ್ಯಾಪ್ತಿಯಲ್ಲಿರುವ ಕೆರೆಗಳು, ಕಾಲುವೆಗಳು ಹೂಳು, ಗಿಡ ಗಂಟಿಗಳಿಂದ ತುಂಬಿದೆ. ನೀರಿನ ಸಂಗ್ರಹಣ ಸಾಮರ್ಥ್ಯ ಕಡಿಮೆ ಆಗಿದೆ. ಕೆರೆ ನೀರು ನೆಚ್ಚಿಕೊಂಡು ರೈತರು ವ್ಯವಸಾಯ ಮಾಡಲು ಸಾಧ್ಯವಿಲ್ಲ. ಬೋರ್ ಇದ್ದವರು ಕೃಷಿ ಮಾಡುತ್ತಿದ್ದಾರೆ. ಇಲ್ಲದಿದ್ದವರ ಕಥೆ ಹೇಳತೀರದು.
ದಶರಥ್, ಅಧ್ಯಕ್ಷ, ಗುಂಡಾಲ್ ಜಲಾಶಯ ಹಳೆ ಸ್ಥಿರ ಅಚ್ಚುಕಟ್ಟು ಪ್ರದೇಶ ಸಂಘ, ಕೊಳ್ಳೇಗಾಲ

*ಮಳೆಗಾಲದಲ್ಲಿ ಮಾತ್ರ ನೀರು
ಯಳಂದೂರು ತಾಲೂಕಿನಲ್ಲಿ ಹಲವಾರು ಕೆರೆಗಳು ಇದ್ದು, ಇವುಗಳ ಅಭಿವೃದ್ಧಿಪಡಿಸ್ವು ಬಗ್ಗೆ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಗಮನಹರಿಸುತ್ತಿಲ್ಲ. ಇದರಿಂದ ಮಳೆಗಾಲದಲ್ಲಿ ಮಾತ್ರ ಸ್ವಲ್ಪ ನೀರು ನಿಲ್ಲುತ್ತದೆ. ಉಳಿದ ಅವಧಿಯಲ್ಲಿ ನೀರು ಖಾಲಿಯಾಗಿ ಬೆಳೆಗಳಿಗೆ ಹಾಗೂ ದನ-ಕರುಗಳಿಗೂ ಕುಡಿಯುವುದಕ್ಕೆ ನೀರಿಲ್ಲದೆ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಕೆರೆಗಳು ಹಾಗೂ ಚೆಕ್ ಡ್ಯಾಂಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.
ಶ್ರೀನಿವಾಸ್ ನಾಯಕ್, ನಿವಾಸಿ, ಯಳಂದೂರು

*ಕೆರೆಗಳನ್ನು ಅಭಿವೃದ್ಧಿಗೊಳಿಸಿ
ಯಳಂದೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸುಮಾರು 33 ಗ್ರಾಮಗಳು ಕೂಡ ದೊಡ್ಡ ಕೆರೆಗಳು ಹಾಗೂ ಕಟ್ಟೆಗಳಿಂದ ಕೂಡಿದೆ. ಸಮರ್ಪಕವಾಗಿ ಕೆರೆಗಳನ್ನು ಅಭಿವೃದ್ಧಿ ಮಾಡದ ಪರಿಣಾಮ ಕೆರೆಗಳಲ್ಲಿ ನೀರು ತುಂಬುತ್ತಿಲ್ಲ. ಭಾಗಶಃ ಕೃಷಿಗೆ ಕಬಿನಿ ನಾಲೆಯ ನೀರನ್ನೇ ಅವಲಂಬಿಸಲಾಗಿದೆ. ನಾಲೆಗಳಲ್ಲೂ ಸಹ ಹೂಳು ತುಂಬಿಕೊಂಡು ಸೂಕ್ತ ರೀತಿಯಲ್ಲಿ ನೀರು ಹರಿಯುತ್ತಿಲ್ಲ. ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಗಮನ್ಹರಿಸಿ ಕೆರೆ-ಕಟ್ಟೆ ಹಾಗೂ ಡ್ಯಾಂಗಳ ಅಭಿವೃದ್ಧಿಗೆ ಕ್ರಮವಹಿಸಬೇಕು.
ರಾಜೇಶ್ವರಿ, ಗೌಡಹಳ್ಳಿ, ಚಾಮರಾಜನಗರ

*ಹೂಳು ತುಂಬಿದ ನಾಲೆಗಳು
ಹನೂರು ಭಾಗದ ಬೆಳತ್ತೂರು, ಉದ್ದನೂರು ಹಾಗೂ ಇನ್ನಿತರೆ ಗ್ರಾಮಗಳ ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಕೋಟ್ಯಾಂತರ ರೂ, ವೆಚ್ಚದಲ್ಲಿ ಹುಬ್ಬೆಹುಣಸೆ ಡ್ಯಾಂ ನಿರ್ಮಿಸಿ ಹಲವು ವರ್ಷಗಳೇ ಕಳೆದಿದ್ದು, ಆರಂಭದಲ್ಲಿ ನಾಲೆಗಳಿಗೆ ನೀರು ಹರಿಸಲಾಗಿತ್ತು. ಆದರೆ ಹಲವು ವರ್ಷಗಳಿಂದಲೂ ನಾಲೆಗಳ ಬಹುತೇಕ ಕಡೆಗಳಲ್ಲಿ ಹೂಳು ತುಂಬಿದೆ. ಇನ್ನು ಕೆಲವೆಡೆ ದುರಸ್ತಿಗೊಂಡಿದೆ. ಇದೀಗ ಡ್ಯಾಂ ಭರ್ತಿಯಾಗಿದ್ದರೂ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಮಾತ್ರ ಸೀಮಿತವಾಗಿದ್ದು, ನೀರು ಇಂಗುತ್ತಿದೆ. ಇದರಿಂದ ರೈತರಿಗೆ ನೀರಾವರಿ ಸೌಕರ್ಯ ದೊರಕುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ನಾಲೆಗಳಲ್ಲಿ ಹೂಳು ತೆಗೆಸುವುದರ ಮೂಲಕ ನೀರಾವರಿ ಸೌಕರ್ಯ ಒದಗಿಸಬೇಕು.
ನಾಗರತ್ನ, ರೈತ ಮಹಿಳೆ, ಬೆಳತ್ತೂರು, ಹನೂರು

*ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿ
ಗ್ರಾಮದ ಹೊರವಲಯದಲ್ಲಿ ಜಮೀನನ್ನು ಹೊಂದಿದ್ದು, ಕುಟುಂಬಸ್ಥರ ಜತೆಗೂಡಿ ಕೃಷಿ ಮಾಡುತ್ತಿದ್ದೇನೆ. ಕಳೆದ ವರ್ಷ ಮಳೆಯಾಗದ ಪರಿಣಾಮ ಸಮೀಪವಿರುವ ಹುಬ್ಬೆಹುಣಸೆ ಡ್ಯಾಂ ಸಂಪೂರ್ಣ ಬತ್ತಿಹೋಗಿತ್ತು. ಇದರಿಂದ ಕೃಷಿಗೆ ಹಿನ್ನಡೆಯಾಗಿತ್ತು. ಆದರೀಗ ಡ್ಯಾಂ ಭರ್ತಿಯಾಗಿದೆ. ಆದರೆ ನಾಲೆಗಳ ದುರಸ್ತಿಯಿಂದಾಗಿ ನೀರು ಬಿಡುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿಬೇಕು. ಜತೆಗೆ ಸ್ಥಗಿತಗೊಂಡಿರುವ ಕಾವೇರಿ ನದಿ ಮೂಲದಿಂದ ಡ್ಯಾಂಗೆ ನೀರು ತುಂಬಿಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇದರಿಂದ ಈ ಭಾಗದ ಜನರಿಗೆ ಶಾಶ್ವತ ನೀರಾವರಿ ಸೌಕರ್ಯ ಒದಗಿಸಿದಂತಾಗುತ್ತದೆ.
ಸುಮಾ, ರೈತ ಮಹಿಳೆ, ಉದ್ದನೂರು, ಹನೂರು

*ಕೆರೆಗಳ ಹೂಳು ತೆಗೆಯಿಸಿ
ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಅಂತರ್ಜಲ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೇ ಭಾಗಶಃ ಕೆರೆಗಳು ಮತ್ತು ಕೆರೆಗಳಿಗೆ ನೀರು ಹರಿದು ಬರುವ ಮೂಲಗಳು ಒತ್ತುವರಿಯಾಗಿದೆ. ಅದಲ್ಲದೇ ಕೆರೆಗಳಲ್ಲಿ ಹೂಳು ತುಂಬಿಕೊಂಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ, ರೈತರ ಸಹಭಾಗಿತ್ವದಲ್ಲಿ ಹೂಳು ತೆಗೆಸಲು ಕ್ರಮವಹಿಸಬೇಕು. ಡ್ಯಾಂಗಳಿಂದ ಕೆರೆಗಳಿಗೆ ನೀರು ತುಂಬಿಸುವ ಸಮಗ್ರ ಯೋಜನೆಯನ್ನು ಜಾರಿಗೊಳಿಸಬೇಕು. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಗಮನಹರಿಸಬೇಕು. ಆಗ ರೈತರು ಕೃಷಿ ಚಟುವಟಿಕೆ ನಡೆಸಲು ಮತ್ತು ಅಂತರ್ಜಲ ವೃದ್ಧಿಯಾಗಲು ಕೂಡ ನೆರವಾಗುತ್ತದೆ.
ಹಳ್ಳಿಕೆರೆಹುಂಡಿ ಭಾಗ್ಯರಾಜ್, ರೈತಮುಖಂಡ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net