

ಹನೂರು: ತಾಲೂಕಿನ ಪುದು ರಾಮಾಪುರ ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನ ಮಂಜೂರಾಗಿರುವ ಹಿನ್ನೆಲೆಯಲ್ಲಿ ಬುಧವಾರ ತಾಲೂಕು ರೈತ ಸಂಘದ ವತಿಯಿಂದ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಪುದು ರಾಮಾಪುರ ಗ್ರಾಮ ಘಟಕದ ಅಧ್ಯಕ್ಷ ಪಳನಿಸ್ವಾಮಿ ಮಾತನಾಡಿ, ಗ್ರಾಮದಲ್ಲಿ ಹಲವು ದಶಕಗಳಿಂದಲೂ ವಾಸಿಸುತ್ತಿದ್ದರೂ ಸ್ಮಶಾನ ಇರಲಿಲ್ಲ. ಇದರಿಂದ ಕೆಲವರು ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರೆ, ಜಮೀನು ಇಲ್ಲದವರು ತುಂಬಾ ತೊಂದರೆ ಅನುಭವಿಸುವಂತಾಗಿತ್ತು. ಸರ್ಕಾರದಿಂದ ಸ್ಮಶಾನ ಸೌಕರ್ಯ ಒದಗಿಸುವಂತೆ ಕಳೆದ ಹಲವು ತಿಂಗಳ ಹಿಂದೆ ತಹಸೀಲ್ದಾರ್ ಅವರ ಗಮನಕ್ಕೆ ತರಲಾಗಿತ್ತು. ಅವರು ಅಗತ್ಯ ಕ್ರಮವಹಿಸಿದ ಪರಿಣಾಮ 1.25 ಎಕರೆ ಜಾಗವನ್ನು ಕಾಯ್ದಿರಿಸಿ ಸ್ಮಶಾನ ಮಂಜೂರು ಮಾಡಿದ್ದಾರೆ. ಈ ದೆಸೆಯಲ್ಲಿ ಗ್ರಾಮಸ್ಥರಿಗೆ ಸ್ಮಶಾನ ಮಂಜೂರಾತಿ ಪತ್ರವನ್ನು ಹಸ್ತಾಂತರಿಸುವಂತೆ ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿದರು. ಈ ಬಗ್ಗೆ ದಿನಾಂಕ ನಿಗದಿಗೊಳಿಸಿ ಮಂಜೂರಾತಿ ಪತ್ರವನ್ನು ಹಸ್ತಾಂತರಿಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಪದಾಧಿಕಾರಿಗಳಾದ ಗೋಪಾಲ, ರಾಜಣ್ಣ, ನಾರಾಯಣ, ಪಳನಿಸ್ವಾಮಿ, ಇನ್ನಿತರರು ಇದ್ದರು.