ರಾಜ್ಯಮಟ್ಟದ ತುರ್ತು ವೈದ್ಯಕೀಯ ಸಮ್ಮೇಳನ

20rajesh10
Published on

ಚಾಮರಾಜನಗರ: ಅಪಘಾತದಲ್ಲಿ ಗಾಯುಗೊಂಡ ವ್ಯಕ್ತಿಗೆ ನೀಡುವ ತುರ್ತು ವೈದ್ಯಕೀಯ ಸೇವೆ ಜೀವ ರಕ್ಷಕವಾಗಿ ಕೆಲಸ ಮಾಡುವುದರಿಂದ ರೋಗಿಗಳ ಆರೈಕೆಯಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಭಿಪ್ರಾಯಪಟ್ಟರು.

ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೆ.ಇ.ಪಿ.ಎ ಹಾಗೂ ಇ.ಎಂ.ಕೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ 3 ದಿನಗಳ ರಾಜ್ಯಮಟ್ಟದ 4ನೇ ವಾರ್ಷಿಕ ತುರ್ತು ವೈದ್ಯಕೀಯ ಸಮ್ಮೇಳನ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಆಡಳಿತ ವಿಚಾರದಲ್ಲಿ ಕೆಲವು ಸಂದರ್ಭಗಳಲ್ಲಿ ನಮ್ಮ ನಿರ್ಧಾರಗಳು ಏರುಪೇರಾದರು ಸರಿಪಡಿಸಬಹುದು. ಆದರೆ ಜೀವ ಉಳಿಸುವ ವೈದ್ಯರ ನಿರ್ಧಾರ ತಪ್ಪಾದರೆ ಒಂದು ಜೀವವೇ ಹೋಗುವ ಸಂಭವವಿರುತ್ತದೆ. ಹಾಗಾಗಿ ವೈದ್ಯರು ಯಾವುದೇ ಸಮಯದಲ್ಲಿ ಗೊಂದಲಕ್ಕೆ ಒಳಗಾಗದೇ ಎಚ್ಚರದಿಂದಿರಬೇಕು. ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗಿಂತ ಉತ್ತಮ ವೈದ್ಯಕೀಯ ಸೇವೆ ನೀಡಬೇಕಿದೆ ಎಂದರು.

ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಶುಶ್ರೂಷಕರ ಕೊರತೆಯಿಂದ ದಿನನಿತ್ಯ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಜವಾಬ್ದಾರಿ ವೈದ್ಯರಿಗಿದೆ. ಯಾವುದೇ ಕ್ಷಣದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿನಿಂತು ವೈದ್ಯರು ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಜೀವ ಉಳಿಸುವ ಕಾಯಕದಲ್ಲಿ ವೈದ್ಯರ ಜವಾಬ್ದಾರಿ ಮಹತ್ವದಾಗಿದ್ದು, ಸಮಾಜಕ್ಕೆ ವೈದ್ಯರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರವಲ್ಲದೇ ಅರಣ್ಯ ಪ್ರದೇಶದಲ್ಲಿ ವಾಸಿಸುವ ಆದಿವಾಸಿಗಳಿಗೆ ಮೂಲಸೌಲಭ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕಾಡಂಚಿನ ಭಾಗದಲ್ಲಿರುವ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗಿದ್ದು, ಡಯಾಲಿಸಿಸ್ ಕೇಂದ್ರವನ್ನು ಕೂಡ ತೆರೆಯಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಎಲ್ಲಾ ಬಗೆಯ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅಪಘಾತಗಳಿಗೆ ಕಡಿವಾಣ ಹಾಕಲು ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಕ್ರಿಯವಾಗಿದೆ. ರಾಜ್ಯಮಟ್ಟದ ತುರ್ತು ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸಿರುವ ವೈದ್ಯರು ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಬೇಕು. ಜಿಲ್ಲೆಯ ಸೌಂದರ್ಯವನ್ನು ಆಸ್ವಾದಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಹೇಳಿದರು.

ಬೆಂಗಳೂರಿನ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ಮುಖ್ಯಸ್ಥೆ ಡಾ. ಅರುಣಾ ಸಿ. ರಮೇಶ್, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ. ಮಂಜುನಾಥ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಗಿರೀಶ್ ವಿ. ಪಾಟೀಲ್, ಡಾ. ಕೆ.ವಿ. ಅಭಿಷೇಕ್, ಡಾ. ಬಾಲಸುಬ್ರಹ್ಮಣ್ಯ, ಡಾ. ಮಾರುತಿ, ಡಾ. ವಾಸೀಂ, ಡಾ. ಉದಯಕುಮಾರ್ ಕಾರ್ಯಕ್ರಮದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net