

ಚಾಮರಾಜನಗರ: ಮನುಷ್ಯನಿಗೆ ಆರೋಗ್ಯಕರ ಸದೃಢ ದೇಹ, ಪೌಷ್ಠಿಕಾಂಶಯುತ ಆಹಾರ ಅಗತ್ಯವಾಗಿದ್ದು, ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪೋಷಣ್ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೋನಾರೋತ್ ತಿಳಿಸಿದರು.
ತಾಲೂಕಿನ ಹಂಡ್ರಕಳ್ಳಿ ಮೋಳೆಯ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೋಷಣ್ ಅಭಿಯಾನ ಯೋಜನೆಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಣ್ ಅಭಿಯಾನ ಯೋಜನೆಯು 2018ರ ಮಾ.8ರಂದು ಅನುಷ್ಠಾನಗೊಂಡಿದೆ. ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸುವ ಮಾರ್ಚ್ 8ರಂದು ಆರಂಭಗೊಂಡಿರುವ ಪೋಷಣ್ ಯೋಜನೆಯ ಮುಖ್ಯ ಉದ್ದೇಶ ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ತಡೆಗಟ್ಟುವುದು, ಗರ್ಭಿಣಿ, ಬಾಣಂತಿಯರು ಚಿಕ್ಕ ಮಕ್ಕಳಲ್ಲಿ ಉಂಟಾಗುವ ರಕ್ತಹೀನತೆಯನ್ನು ಕಡಿಮೆಗೊಳಿಸುವುದಾಗಿದೆ ಎಂದರು.
ಆರೋಗ್ಯಕರವಾದ ಸದೃಢ ದೇಹ, ಪೌಷ್ಠಿಕವುಳ್ಳ ಆಹಾರ ಪ್ರತಿಯೊಬ್ಬರಿಗೂ ಅತ್ಯಂತ ಅವಶ್ಯವಿದೆ. ಈ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸುವ ಸಲುವಾಗಿ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಸೆ.1ರಿಂದ 31ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸೀಮಂತ, ಅನ್ನ ಪ್ರಸನ್ನ ಕಾರ್ಯಕ್ರಮವು ನಡೆಯಿತು. ಪ್ರಧಾನಮಂತ್ರಿ ಮಾತೃವಂದನಾ ಸಪ್ತಾಹ ಕಾರ್ಯಕ್ರಮ ಸಹ ನಡೆಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಅಮ್ಮನ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೋನಾ ರೋತ್ ಅವರು ನೆರವೇರಿಸಿದರು.
ಮಾದಾಪುರ ಮಾದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಕೆ.ಎಂ. ರೂಪೇಶ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ನಿರೂಪಣಾಧಿಕಾರಿ ಜೆ.ಆರ್. ದಿನೇಶ್, ಪೋಷಣ್ ಅಭಿಯಾನ ಯೋಜನೆಯ ಜಿಲ್ಲಾ ಸಂಯೋಜಕ ಆರ್. ಚೇತನ್ ಕುಮಾರ್, ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕ ಶಿವಸ್ವಾಮಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಮೀನಾಕ್ಷಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕೆಂಪರಾಜು ಇದ್ದರು.