

ಚಾಮರಾಜನಗರ: ವಸತಿ ನಿಲಯಗಳು, ಪಂಚಾಯಿತಿಗಳಿಂದ ಹಾಪ್‌ಕಾಮ್ಸ್‌ಗೆ ಬಾಕಿ ಹಣ ಬರಬೇಕಿದ್ದು, ಇದನ್ನು ವಸೂಲಿ ಮಾಡುವ ಜತೆಗೆ ಸಂಘವನ್ನು ಲಾಭದತ್ತ ಕೊಂಡೊಯ್ಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ಲೋಕೇಶ್ ತಿಳಿಸಿದರು.
ನಗರದ ಹಳೇ ರೇಷ್ಮೆಗೂಡು ಮಾರುಕಟ್ಟೆ ಕಟ್ಟಡದಲ್ಲಿರುವ ಹಾಪ್‌ಕಾಮ್ಸ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಎಲ್ಲ ನಿರ್ದೇಶಕರು ಚರ್ಚೆ ಮಾಡಿ, ಜಿಲ್ಲಾ ಕೇಂದ್ರದಲ್ಲಿರುವ ಹಾಪ್‌ಕಾಮ್ಸ್ ಮಳಿಗೆಯನ್ನು ಪುನಚ್ಚೇತನ ಗೊಳಿಸುವುದು, ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಮಳಿಗೆ ಆರಂಭಿಸಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಯಡಪುರದ ಬಳಿರುವ ವೈದ್ಯಕೀಯ ಕಾಲೇಜು ಅವರಣದಲ್ಲಿ ಮಳಿಗೆ ನಿರ್ಮಾಣ, ತಾಲೂಕು ಕೇಂದ್ರಗಳಲ್ಲಿ ಮಳಿಗೆಯನ್ನು ಆರಂಭಿಸುವ ಬ ಗ್ಗೆ ನಿರ್ಣಾಯ ಮಾಡಲಾಗಿದೆ ಎಂದರು.
ಹಾಪ್‌ಕಾಮ್ಸ್‌ಗೆ ಸ್ವಂತ ಕಟ್ಟಡ ನಿರ್ಮಾಣ ಹಾಗು ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಹಾಸ್ಟೆಲ್‌ಗಳಿಗೆ ತರಕಾರಿ ಹಾಗೂ ಹಣ್ಣುಗಳನ್ನು ಸರಬರಾಜು ಮಾಡುವುದು, ವಿದ್ಯಾರ್ಥಿಗಳಿಗೆ ತಾಜಾ ಹಣ್ಣು ಹಾಗೂ ತರಕಾರಿಯನ್ನು ಪೊರೈಕೆ ಮಾಡಲು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಬಿ. ಶೃತಿ ಕುಮಾರಸ್ವಾಮಿ, ನಿರ್ದೇಶಕರಾದ ವೈ.ಪಿ.ರಾಜೇಂದ್ರಪ್ರಸಾದ್, ಆರ್. ಪುರುಷೋತ್ತಮ್, ಎಂ.ಪಿ. ನಿರಂಜನ್‌ಮೂರ್ತಿ, ಪುಟ್ಟರಸು, ಪುಟ್ಟುಸುಬ್ಬಪ್ಪ, ಎಸ್. ಬಸವಶೆಟ್ಟಿ, ಜಿ. ಲೋಕೇಶ್, ರಾಜಮ್ಮ, ಕೆಎಚ್‌ಎಫ್ ಪ್ರತಿನಿಧಿ ಸೂರ್ಯಕುಮಾರ್, ಸಂಘದ ವ್ಯವಸ್ಥಾಪಕ ಜಿ.ಎಸ್. ರಾಜು, ಎಪಿಎಂಸಿ ಅಧ್ಯಕ್ಷ ಸೋಮೇಶ್, ಸಿಇಓ ನವೀನ್, ಕಾರ್ಯದರ್ಶಿ ಯತಿರಾಜ್, ಮಳಿಗೆ ನೌಕರರಾದ ಮಧು, ಬಸವರಾಜು, ಹಾಗೂ ಸದಸ್ಯರು ಭಾಗವಹಿಸಿದ್ದರು.