

ಚಾಮರಾಜನಗರ: ಸಹಕಾರಿಗಳ ಬೆಳವಣಿಗೆಗೆ ಸರಳ ಮತ್ತು ಸುಲಭವಾದ ಮಾರ್ಗವೆಂದರೆ ಸಂಘವನ್ನು ಬೆಳೆಸುವುದಾಗಿದೆ ಎಂದು ಚಾಮುಲ್ ಅಧ್ಯಕ್ಷ ವೈ.ವಿ.ನಾಗೇಂದ್ರ ಹೇಳಿದರು.
ತಾಲೂಕಿನ ಮರಿಯಾಲದ ಬಸವ ಮಹಾಮನೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀಮುರುಘರಾಜೇಂದ್ರಸ್ವಾಮಿ ಸೌಹಾರ್ದ ಸಹಕಾರಿ ಸಂಘದ 6ನೇ ಸರ್ವ ಸದಸ್ಯರ ವಾರ್ಷಿಕ ವಹಾಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಹಕಾರ ಸಂಘಗಳ ಅಭಿವೃದ್ಧಿಯ ಹಿಂದೆ ಸದಸ್ಯರ ಶ್ರೇಯಸ್ಸೂ ಅಡಗಿದೆ. ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳನ್ನು ಬೆಳೆಸುವ ಕಾರ್ಯವಾಗಬೇಕು ಎಂದರು. ಸಂಘದ ಗೌರವಾಧ್ಯಕ್ಷ ಜಿ.ಕುಮಾರಸ್ವಾಮಿ ಶ್ರೀಮುರುಘರಾಜೇಂದ್ರಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಶ್ರೀಮಠದ ಅಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ಬಿ.ನಂಜುಂಡಸ್ವಾಮಿ, ಕಾನೂನು ಸಲಹೆಗಾರ ಎ.ಎಸ್.ಸಿದ್ದರಾಜು, ಬಲರಾಮ್ ಮತ್ತು ಇತರರು ಇದ್ದರು.