

ಚಾಮರಾಜನಗರ: ಸಾರ್ವಜನಿಕರಿಗೆ ಶುಚಿತ್ವ, ನೈರ್ಮಲ್ಯದ ಕುರಿತು ವ್ಯಾಪಕ ಅರಿವು ಮೂಡಿಸಲು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿರುವ ಸ್ವಚ್ಛತಾ ಹೀ ಸೇವಾ ಆಂದೋಲನ ಕಾರ್ಯಕ್ರಮಕ್ಕೆ ಕೆಲ್ಲಂಬಳ್ಳಿಯಲ್ಲಿ ಮಂಗಳವಾರ ಶಾಸಕ ಸಿ. ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.
ತಾಲೂಕಿನ ಭೋಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ್ಲಂಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತಾಲೂಕು ಪಂಚಾಯಿತಿ ಹಾಗೂ ಭೋಗಾಪುರ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಧ್ಯೇಯೋದ್ದೇಶದೊಂದಿಗೆ ಆಯೋಜಿಸಲಾಗಿದ್ದ ಸ್ವಚ್ಛತಾ ಹೀ ಸೇವಾ ಆಂದೋಲನ ಪಾಕ್ಷಿಕ ಆಚರಣೆ ಕಾರ್ಯಕ್ರಮವನ್ನು ಶಾಸಕರಾದ ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇಂದಿನಿಂದ ಅ.2ರವರೆಗೆ ಸ್ವಚ್ಛತೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸಾರ್ವಜನಿಕರು, ಮಹಿಳೆಯರು, ಮಕ್ಕಳಿಗೆ ಗ್ರಾಮಗಳ ಶುಚಿತ್ವ, ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವುದೇ ಸ್ವಚ್ಛತಾ ಸೇವೆ ಪಾಕ್ಷಿಕ ಆಚರಣೆಯ ಉದ್ದೇಶವಾಗಿದೆ. 1917ರಲ್ಲಿಯೇ ಸ್ವಚ್ಛತಾ ಆಂದೋಲನ ಪ್ರಾರಂಭವಾಗಿದೆ ಎಂದರು.
ಮಹಾತ್ಮ ಗಾಂಧೀಜಿ ಅವರು ಗ್ರಾಮಗಳ ಸ್ವಚ್ಛತೆಯಿಂದ ದೇಶದ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡಿದ್ದರು. ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದನ್ವಯ ಪ್ರತಿವರ್ಷದಂತೆ ಈ ಬಾರಿಯೂ ಸ್ವಚ್ಛತಾ ಸಂಬಂಧ ವಿಶಿಷ್ಟ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆಯೇ ಸೇವೆ ಶೀರ್ಷಿಕೆಯಡಿ ಆಯೋಜಿಸಲಾಗುತ್ತಿದೆ. ಗ್ರಾಮಗಳ ಸ್ವಚ್ಛತಾ ಕಾರ್ಯದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅವಶ್ಯವಾಗಿದೆ ಎಂದು ತಿಳಿಸಿದರು.
ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಆರೋಗ್ಯದ ಹಿತದೃಷ್ಟಿಯಿಂದ ಗ್ರಾಮೀಣ ಜನರು ಬಯಲು ಬಹಿರ್ದೆಸೆ ತ್ಯಜಿಸಿ ಶೌಚಗೃಹಗಳನ್ನು ಬಳಸಬೇಕು. ಸಾಮೂಹಿಕ ಶೌಚಗೃಹಗಳ ನಿರ್ವಹಣೆ ಸಮರ್ಪಕವಾಗಿರಬೇಕು. ಶೌಚಗೃಹ ನಿರ್ಮಾಣಕ್ಕಾಗಿ ಸರ್ಕಾರವು ಲಕ್ಷಾಂತರ ರೂ. ವೆಚ್ಚ ಮಾಡುತ್ತಿದೆ. ಸ್ವಚ್ಛತೆಗಾಗಿ ಬಿಡುಗಡೆಯಾಗುವ ಅನುದಾನ ಸದ್ಭಳಕೆಯಾಗಬೇಕು. ಈ ಬಗ್ಗೆ ಮಹಿಳೆಯರು, ಮಕ್ಕಳಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರು ಸ್ವಚ್ಛತಾ ಕಾರ್ಯಕ್ರಮಗಳ ನೇತೃತ್ವ ವಹಿಸಿ ಆಯಾ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಮೋನಾ ರೋತ್ ಮಾತನಾಡಿ, ಗಾಂಧಿ ಜಯಂತಿ ಅಂಗವಾಗಿ ಪ್ರತಿವರ್ಷ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಸ್ವಚ್ಛತಾ ಹೀ ಸೇವಾ ಆಂದೋಲನ ಪಾಕ್ಷಿಕ ಆಚರಣೆಯ ಮೂಲಕ ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳಲ್ಲಿಯೂ ಸ್ವಚ್ಛತೆಗೆ ಸಂಬಂಧಿಸಿದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಸೋಮಶೇಖರ್ ಕಾರ್ಯಕ್ರಮದಲ್ಲಿ ಸ್ವಚ್ಛತೆ ಬಗ್ಗೆ ಮಾತನಾಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಸ್ವಚ್ಛತೆಯ ಕುರಿತ ಪ್ರತಿಜ್ಞಾವಿಧಿ ಬೋಧಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೂಪಾ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಶಾಲಾ ಮಕ್ಕಳು ಅನುಪಯುಕ್ತ ವಸ್ತುಗಳಿಂದ ತಯಾರಿಸಿದ ವಿವಿಧ ಅಲಂಕಾರಿಕ ಕಲಾಕೃತಿಗಳನ್ನು ಗಣ್ಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳನ್ನೊಳಗೊಂಡು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸ್ವಚ್ಛತೆ ಕುರಿತ ಜಾಗೃತಿ ಜಾಥಾಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಸಿರು ನಿಶಾನೆ ತೋರಿದರು. ತದನಂತರ ಗ್ರಾಮದ ಸ್ವಚ್ಛತಾ ಶ್ರಮದಾನದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದ ಬಳಿಕ ಭೋಗಾಪುರ ಬಳಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ 10 ಲಕ್ಷ ರೂ. ವೆಚ್ಚದಲ್ಲಿ ಸ್ವಚ್ಛ ಸಂಕೀರ್ಣ ಉದ್ದೇಶಕ್ಕಾಗಿ ನಿರ್ಮಿಸಿರುವ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕವನ್ನು ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾನಸ, ಕುದೇರು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕುಮುದಾ, ಭೋಗಾಪುರ ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರು, ಕೆಲ್ಲಂಬಳ್ಳಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರು ಎಸ್‌ಡಿಎಂಸಿ ಅಧ್ಯಕ್ಷರು, ಕೆಲ್ಲಂಬಳ್ಳಿ ಗ್ರಾಮಸ್ಥರು, ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.