ಆದಿವಾಸಿಗಳಿಗೆ ಸಿಕಲ್‌ಸೆಲ್ ತಪಾಸಣೆ

18rajesh7
Published on

ಚಾಮರಾಜನಗರ: ನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಆದಿವಾಸಿ ಸಮುದಾಯದ ವತಿಯಿಂದ ಬುಧವಾರ ಸಿಕಲ್‌ಸೆಲ್ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಸಿಮ್ಸ್), ಸೆಂಟರ್ ಫಾರ್ ಟ್ರೈನಿಂಗ್ ರಿಸರ್ಚ್ ಅಂಡ್ ಇನ್ನೋವೇಶನ್ ಇನ್ ಟ್ರೈಬಲ್ ಹೆಲ್ತ್ ಅಭಿಯಾನ ಹಾಗೂ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಸಹಯೋಗದಲ್ಲಿ ಶಿಬಿರ ನಡೆಯಿತು.

ಜಿಲ್ಲೆಯ ವಿವಿಧ ಕಡೆಗಳಿಂದ 60ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಪಾಲ್ಗೊಂಡರು. ಮಾಸ್ಟರ್ ಹೆಲ್ತ್ ಚೆಕಪ್, ಸ್ಟ್ರೋಕ್ ಸಂಭವನೀಯತೆ ಪತ್ತೆ ಹಚ್ಚಬಲ್ಲ ಪರೀಕ್ಷೆ, ವಿವಿಧ ವಿಭಾಗಗಳ ತಜ್ಞ ವೈದ್ಯರೊಡನೆ ಸಮಾಲೋಚನೆ ಹಾಗೂ ಉಚಿತವಾಗಿ ನೀಡುವ ಔಷಧಗಳನ್ನು ವಿತರಣೆ ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಮಾತನಾಡಿ, ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಸಿಕಲ್ಸೆಲ್ ರೋಗಿಗಳಿಗೆಂದೇ ಈ ರೀತಿಯ ಒಂದು ಆರೋಗ್ಯ ಉಚಿತ ಶಿಬಿರ ಆಯೋಜಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸಿಕಲ್ ಸೆಲ್ ಒಂದು ಅನುವಂಶೀಯ ಕಾಯಿಲೆಯಾಗಿದ್ದು, ಇದನ್ನು ನಿರ್ಮೂಲನೆ ಮಾಡಬೇಕಿದ್ದಲ್ಲಿ ಕಾಯಿಲೆಯ ಕುರಿತು ಹೆಚ್ಚಿನ ಜನಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಎಂದರು.

ಸಂಘ-ಸಂಸ್ಥೆಗಳು, ಸಿಕಲ್ಸೆಲ್ ವಿಷಯ ತಜ್ಞರು, ಸರ್ಕಾರಿ ಇಲಾಖೆಗಳೊಡನೆ ಕೈಜೋಡಿಸಿದ್ದಲ್ಲಿ ಮಾತ್ರ ಈ ಸಮಸ್ಯೆಯಿಂದ ಬಳಲುತ್ತಿರುವವರನ್ನು ಬೇಗ ಗುರುತಿಸಿ, ಸೂಕ್ತ ಔಷಧ ನೀಡುವ ಮೂಲಕ ಅವರ ಜೀವನ ಗುಣಮಟ್ಟ ಸುಧಾರಿಸಬಹುದಾಗಿದೆ. ಈ ರೀತಿಯ ಯೋಜನೆಗಳಿಗೆ ಜಿಲ್ಲಾಡಳಿತ ಮುಂದೆಯೂ ಸಹ ಅಗತ್ಯ ಸಹಕಾರ ನೀಡಲಿದೆ ಎಂದರು.

ಸಿಮ್ಸ್ ಡೀನ್ ಹಾಗೂ ನಿರ್ದೇಶಕ ಡಾ.ಮಂಜುನಾಥ್ ಮಾತನಾಡಿ, ಆದಿವಾಸಿಗಳ ಆರೋಗ್ಯ ಸುಧಾರಣೆಗೆ ಸಂಬಂಧಿಸಿದಂತೆ ಈಗಾಗಲೇ ಟ್ರೈಬಲ್ ಹೆಲ್ತ್ ನವಿಗೇಟರ್ ಯೋಜನೆಯನ್ನು ಜಿಲ್ಲೆಯಲ್ಲಿ ಹಾಗೂ ನಮ್ಮ ಆಸ್ಪತ್ರೆಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ ಮಾತನಾಡಿ, ಆದಿವಾಸಿ ಸಮುದಾಯಗಳಲ್ಲಿ ಸಿಕಲ್ ಸೆಲ್ ತಪಾಸಣಾ ಕಾರ್ಯ ಜಾರಿಯಲ್ಲಿದ್ದು, ಕಾಯಿಲೆ ಪತ್ತೆಯಾದವರಿಗೆ ಇಲಾಖೆ ವತಿಯಿಂದ ಅಭಿಯಾನದಡಿಯಲ್ಲಿ ಉಚಿತ ಔಷಧಗಳನ್ನು ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಅಧಿಕಾರಿ ಡಾ.ರವಿಕುಮಾರ್, ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಸಿಕಲ್ ಸೆಲ್ ತಜ್ಞೆ ಡಾ.ದೀಪಾ ಭಟ್, ಸ್ಟ್ರೋಕ್ ಫೌಂಡೇಷನ್ ತಜ್ಞರಾದ ಡಾ.ಸೂರ್ಯನಾರಾಯನ್ ಶರ್ಮ, ಡಾ.ಮೀನಾಕ್ಷಿ, ಮಾರ್ಗದರ್ಶಿ ಸಂಸ್ಥೆಯ ರಾಜಣ್ಣ, ಸಿಮ್ಸ್ನ ವಿವಿಧ ವಿಭಾಗಗಳ ತಜ್ಞ ವೈದ್ಯರು, ಸಿಬ್ಬಂದಿ, ಸೆಂಟರ್ ಫಾರ್ ಟ್ರೈನಿಂಗ್ ರಿಸರ್ಚ್ ಆ್ಯಂಡ್ ಇನ್ನೋವೇಶನ್ ಇನ್ ಟ್ರೈಬಲ್ಹೆಲ್ತ್ನ ಸಿಬ್ಬಂದಿ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net