

ಚಾಮರಾಜನಗರ :ಸಾಮಾಜಿಕ ಬಹಿಷ್ಕಾರ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಿ ಪ್ರತಿಯೊಬ್ಬರೂ ಸಾಮರಸ್ಯದಿಂದ ಸಾಗಬೇಕಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಚಿಕ್ಕಬಸವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ರಾಮಸಮುದ್ರ ಬಡಾವಣೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ರಂಗದೀವಿಗೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸಾಮಾಜಿಕ ಬಹಿಷ್ಕಾರ ಪ್ರಕರಣಗಳ ಕುರಿತ ಜನಜಾಗೃತಿ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಸ್ಪಸ್ಯತೆ ಆಚರಣೆ ಕುರಿತು ಸಾಮರಸ್ಯ ಕಪಾಡುವ ಉದ್ದೇಶದಿಂದ ಪ್ರತಿ ಗ್ರಾಮಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ.ಸಾಮಾಜಿಕ ಬಹಿಷ್ಕಾರದಂತ ಪ್ರಕರಣಗಳು ಕಾನೂನು ಬಾಹಿರವಾಗಿದೆ. ಯಾವುದೇ ಕಾರಣಕ್ಕೂ ಬಹಿಷ್ಕಾರ ಹಾಕುವುದನ್ನು ಮಾಡಬಾರದು, ಪ್ರತಿಯೊಬ್ಬರು ಅನ್ಯೋನ್ಯತೆಯಿಂದ ಬದುಕಬೇಕು. ವಿನಾಃಕಾರಣ ಗಲಭೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಸಲಹೆ ನೀಡಿದರು.
ಕಲಾವಿದ ಕಲೆ ನಟರಾಜ್ ಮಾತನಾಡಿ, ಸಾಮಾಜಿಕ ಬಹಿಷ್ಕಾರಕ್ಕೆ ದಂಡ ಹಾಗೂ ಶಿಕ್ಷೆ ವಿಧಿಸುವಂತಹ ಕಾನೂನು ಮಹರಾಷ್ಟ್ರದಲ್ಲಿ ಮಾತ್ರ ಇದೆ. ಈ ತರಹದ ಕಾಯ್ದೆಗಳು ನಮ್ಮ ರಾಜ್ಯದಲ್ಲೂ ಬರಬೇಕು. ಯಾರನ್ನೂ ಕೂಡ ಗ್ರಾಮಗಳಲ್ಲಿ ಬಹಿಷ್ಕಾರ ಮಾಡುವಂತಿಲ್ಲ, ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿದೆ ಎಂದರು. ಈ ವೇಳೆ ರಿದಂ ರಾಜಣ್ಣ, ಸುಜಾತ, ಅನಿಲ್ ಉಡಿಗಾಲ, ಜೆಮ್ಸ್ ದೇಶವಳ್ಳಿ, ಗುರುರಾಜ್ ತಮ್ಮಡಹಳ್ಳಿ, ಸುಮತಿ, ಹೇಮಾ ದೇಶವಳ್ಳಿ ಹಾಗೂ ಇತರರು ಭಾಗವಹಿಸಿದ್ದರು.