ಅಣಬೆ ಬೇಸಾಯದಿಂದ ಆದಾಯ ಹೆಚ್ಚು

18rajesh3
Published on

ಚಾಮರಾಜನಗರ: ಉತ್ತಮ ಆರೋಗ್ಯ ನೀಡುವ ಆಹಾರವಾಗಿರುವ ಅಣಬೆಯನ್ನು ಬೆಳೆಯುವುದರಿಂದ ಹೆಚ್ಚು ಆದಾಯವೂ ಸಿಗುತ್ತದೆ ಎಂದು ಕೃಷಿ ಮಹಾವಿದ್ಯಾಲಯದ ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಡಾ.ಜಿ.ನಾಗೇಶ್ ಸಲಹೆ ನೀಡಿದರು.

ತಾಲೂಕಿನ ಕಬ್ಬಳ್ಳಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಚಾಮರಾಜನಗರ ಕೃಷಿ ಮಹಾವಿದ್ಯಾಲಯ ಸಹಯೋಗದಲ್ಲಿ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಅಣಬೆ ಬೇಸಾಯದ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಿಳೆಯರ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಮಾನವನ ಆರೋಗ್ಯದ ದೃಷ್ಟಿಯಿಂದ ಅಣಬೆ ಬೇಸಾಯವು ಪ್ರಮುಖ ಉದ್ಯಮವಾಗಿ ಹೊರಹೊಮ್ಮುತ್ತಿದೆ. ಅಣಬೆ ಬೇಸಾಯದಿಂದ ಮಹಿಳೆಯರು ತಮ್ಮ ಸ್ವಂತ ಉದ್ಯಮವನ್ನು ಸೃಷ್ಟಿಸಿಕೊಳ್ಳಬಹುದು. ಹಲವಾರು ಮಹಿಳೆಯರಿಗೆ ಉದ್ಯಮವನ್ನು ದೊರಕಿಸಿಕೊಡಲು ಅಣಬೆ ಬೇಸಾಯ ಸಹಾಯಕವಾಗುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಅಣಬೆಯು ಉತ್ತಮ ಆಹಾರವಾಗಿದೆ ಎಂದರು. ಈ ವೇಳೆ ಅಂತಿಮ ವರ್ಷದ ವಿದ್ಯಾರ್ಥಿನಿ ರಕ್ಷಿತಾ ಅಣಬೆ ಬೇಸಾಯ ಪದ್ಧತಿಯನ್ನು ಜನರಿಗೆ ತೋರಿಸಿಕೊಟ್ಟರು. ಗ್ರಾಮದ ರೈತರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net