

ಕಿರಣ್ ಮಾದರಹಳ್ಳಿ ಚಾಮರಾಜನಗರ
ಲೈಂಗಿಕ ವೃತ್ತಿಯ ಹಾದಿ ತುಳಿದಿರುವ ದಮನಿತ ಮಹಿಳೆಯರಿಗೆ ಪರ್ಯಾಯ ವೃತ್ತಿ ಆಯ್ಕೆಗಾಗಿ ನೀಡುವ ಆರ್ಥಿಕ ಸೌಲಭ್ಯವು ಹೊಸ ಬದುಕನ್ನು ಕಟ್ಟಿಕೊಳ್ಳುವಷ್ಟಿಲ್ಲ.
ರಾಜ್ಯ ಸರ್ಕಾರ ಚೇತನ ಯೋಜನೆಯಡಿ 18 ವರ್ಷ ಮೇಲ್ಪಟ್ಟ ದಮನಿತ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು 30 ಸಾವಿರ ರೂ. ಪ್ರೋತ್ಸಾಹಧನ ನೀಡುತ್ತಾ ಬಂದಿದೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಚೇತನ ಯೋಜನೆಯಡಿ 2022-23, 2023-2024ನೇ ಸಾಲಿನಲ್ಲಿ ತಲಾ 8 ಮಹಿಳೆಯರು ಅರ್ಜಿ ಸಲ್ಲಿಸಿ 30 ಸಾವಿರ ರೂ. ಆರ್ಥಿಕ ನೆರವು ಪಡೆದುಕೊಂಡಿದ್ದಾರೆ. ಈ ಸಾಲಿನಲ್ಲೂ 8 ಜನ ಮಹಿಳೆಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆ.21ರವರೆಗೂ ಅವಕಾಶವಿದೆ.
ಅರ್ಜಿ ಸಲ್ಲಿಸಿದ ಬಳಿಕ ಪರಿಶೀಲನೆ ನಡೆದ ಅರ್ಹ ಲಾನುಭವಿಗೆ 30 ಸಾವಿರ ರೂ. ಆರ್ಥಿಕ ಸಹಾಯ ಸಿಗಲಿದೆ. 30 ಸಾವಿರ ರೂ. ಸಣ್ಣ ಆದಾಯ ಗಳಿಕೆಗೆ ಮಾತ್ರ ಸೀಮಿತವಾಗಬಹುದು. ಈ ವೃತ್ತಿ ಬಿಟ್ಟು ಹೊಸ ಬದುಕು ಕಟ್ಟಿಕೊಳ್ಳುವುದಕ್ಕಂತೂ ಸಾಲುವುದಿಲ್ಲ.
2 ಸಾವಿರ ದಮನಿತ ಮಹಿಳೆಯರು: ಗಡಿಜಿಲ್ಲೆ ಚಾಮರಾಜನಗರದಲ್ಲಿ 2 ಸಾವಿರಕ್ಕೂ ಹೆಚ್ಚು ದಮನಿತ ಮಹಿಳೆಯರು ಇದ್ದಾರೆ. ಜಿಲ್ಲೆಯಲ್ಲಿ ಇವರಿಗಾಗಿಯೇ ಸ್ನೇಹ ಜ್ಯೋತಿ ಸಂಸ್ಥೆ ಕೆಲಸ ಮಾಡುತ್ತಿದೆ. ಆರೋಗ್ಯ ತಪಾಸಣೆ, ಕಾಂಡೋಮ್ ವಿತರಣೆ, ಎಚ್‌ಐವಿ, ಟಿಬಿ ಪರೀಕ್ಷೆ, ಕೌನ್ಸಿಲಿಂಗ್, ಸಾಲ ಸೌಲಭ್ಯಗಳನ್ನು ನೀಡುತ್ತಿದೆ.
ಈ ಸಂಸ್ಥೆ ಪ್ರತಿ ವರ್ಷ ಸರ್ವೇ ನಡೆಸಿ ದಮನಿತ ಮಹಿಳೆಯರ ಅಂಕಿ-ಅಂಶಗಳನ್ನು ಕಲೆ ಹಾಕುತ್ತಿದೆ. ಅದರ ಪ್ರಕಾರ, ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ದಮನಿತ ಮಹಿಳೆಯರು ಇದ್ದಾರೆ. ಇವರ ಕುರಿತು ಅಧ್ಯಯನ ನಡೆಸಿದಾಗ ಬಹುಪಾಲು ಸೀಯರು ಆರ್ಥಿಕ ಸಮಸ್ಯೆ, ಹೊಟ್ಟೆಪಾಡು, ಕುಟುಂಬ ನಿರ್ವಹಣೆ, ಸಾಲ ಕಟ್ಟಲು ಮತ್ತು ಇನ್ನಿತರ ಕಾರಣಗಳಿಂದ ಈ ಹಾದಿ ತುಳಿದಿದ್ದಾರೆ ಎಂದು ತಿಳಿದುಬಂದಿದೆ.
1431 ಮಹಿಳೆಯರಿಗೆ ಏಡ್ಸ್:
ಜಿಲ್ಲೆಯಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಾಗಿ 1431 ಮಹಿಳೆಯರು ಎಚ್‌ಐವಿಯಿಂದ ಬಳಲುತ್ತಿದ್ದಾರೆ. ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಕ ಘಟಕ ನೀಡಿರುವ ಮಾಹಿತಿ ಪ್ರಕಾರ, ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 2,740 ಜನರು ಎಚ್‌ಐವಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 1431 ಮಹಿಳೆಯರು, 1200 ಪುರುಷರು, 7 ತೃತೀಯ ಲಿಂಗಿಗಳು ಎಚ್‌ಐವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪ್ಪ-ಅಮ್ಮ ಮಾಡಿದ ತಪ್ಪಿಗೆ 54 ಗಂಡು ಮಕ್ಕಳು(18 ವರ್ಷದೊಳಗಿನವರು), 46 ಹೆಣ್ಣು ಮಕ್ಕಳು(18 ವರ್ಷದೊಳಗಿನವರು) ಏಡ್ಸ್ ನಿಂದ ಬಳಲುತ್ತಿದ್ದಾರೆ. ಇವರಿಗೆಲ್ಲಾ ನಿಯಮಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. 2024ರ ಆಗಸ್ಟ್‌ವರೆಗೆ 2032 ಜನರು ಏಡ್ಸ್‌ನಿಂದ ಮೃತಪಟ್ಟಿದ್ದಾರೆ.
ಸ್ನೇಹ ಜ್ಯೋತಿ ಸಂಸ್ಥೆ ಗುರುತಿಸಿರುವ ಜಿಲ್ಲೆಯ 2 ಸಾವಿರಕ್ಕೂ ಹೆಚ್ಚು ದಮನಿತ ಮಹಿಳೆಯರಲ್ಲಿ 36 ಮಹಿಳೆಯರಿಗೆ ಎಚ್‌ಐವಿ ಇದೆ. ಎಚ್‌ಐವಿ ಪೀಡಿತ ಮಹಿಳೆಯರಿಗೆ ಧನಶ್ರೀ ಯೋಜನೆಯಡಿ ಪ್ರತಿ ವರ್ಷ 30 ಸಾವಿರ ರೂ.ಸಹಾಯಧನ ನೀಡಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ 18 ಮಹಿಳೆಯರು ಆರ್ಥಿಕ ನೆರವು ಪಡೆದುಕೊಂಡಿದ್ದಾರೆ. ದಮನಿತ ಮಹಿಳೆಯರು, ಎಚ್‌ಐವಿ ಪೀಡಿತ ಮಹಿಳೆಯರಿಗೆ ಹೋಲಿಸಿದರೆ ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡುವ ಸೌಲಭ್ಯದಲ್ಲಿ ಲಾನುಭವಿಗಳ ಸಂಖ್ಯೆ ಹೆಚ್ಚಿದೆ. ಪ್ರತಿ ವರ್ಷ 15 ಲಿಂಗತ್ವ ಅಲ್ಪಸಂಖ್ಯಾತರಿಗೆ 30 ಸಾವಿರ ರೂ. ಆರ್ಥಿಕ ನೆರವು ದೊರೆಯುತ್ತಿದೆ. ಈ ವರ್ಷ ಲಾನುಭವಿಗಳ ಗುರಿ 16ಕ್ಕೆ ಏರಿಕೆಯಾಗಿದೆ.
ಅಧ್ಯಯನ ವರದಿ ಏನಾಯ್ತು?
ರಾಜ್ಯದಲ್ಲಿ ದಮನಿತ ಮಹಿಳೆಯರ ಸ್ಥಿತಿಗತಿ ಅಧ್ಯಯನ ನಡೆಸಿ ಸಿದ್ಧಪಡಿಸಿದ್ದ ವರದಿ ಪ್ರಯೋಜನಕ್ಕೆ ಬಂದಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನ ಪರಿಷತ್ತಿನ ಸದಸ್ಯೆ ಜಯಮಾಲಾ ನೇತೃತ್ವದಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನಕ್ಕಾಗಿ ಸಮಿತಿ ರಚನೆ ಮಾಡಿದ್ದರು. ಈ ಸಮಿತಿ ಚಾಮರಾಜನಗರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ದಮನಿತ ಮಹಿಳೆಯರ ಅಳಲು ಆಲಿಸಿತ್ತು.
ಈ ಮಹಿಳೆಯರ ಸ್ಥಿತಿಗೆ ಯಾರು ಕಾರಣ, ಏಕೆ ಹೀಗಾಗಿದೆ, ಮಕ್ಕಳ ಸ್ಥಿತಿ ಹೇಗಿದೆ, ಕೌಟುಂಬಿಕ ಮತ್ತು ಆರ್ಥಿಕ ವಿವರಗಳನ್ನು ಪಡೆದುಕೊಳ್ಳಲಾಗಿತ್ತು. ಈ ವರದಿಯನ್ನು ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಮಹಿಳೆಯರನ್ನು ಇನ್ನು ಮುಂದೆ ‘ದಮನಿತ ಮಹಿಳೆಯರು’ ಎಂದು ಕರೆಯಲು ಶಿಾರಸು ಮಾಡಿತ್ತು. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಈಗಲಾದರೂ ವರದಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ದಮನಿತ ಮಹಿಳೆಯರಿಗೆ ಹೊಸ ಬದುಕು ಕಲ್ಪಿಸಿಕೊಡಬೇಕಾಗಿದೆ.
ದಮನಿತ ಮಹಿಳೆಯರು ತಮ್ಮ ಕಸುಬನ್ನು ಬಿಡಬೇಕೆನ್ನುವುದೇ ಎಲ್ಲರ ಉದ್ದೇಶವಾಗಿದೆ. ಲಿಂಗತ್ವ ಅಲ್ಪಸಂಖ್ಯಾತರು, ಎಚ್‌ಐವಿ ಪೀಡಿತರು ಮತ್ತು ದಮನಿತ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕೆನ್ನುವುದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ನೆರವು ಒದಗಿಸಿಕೊಡಬೇಕೆಂಬ ಚಿಂತನೆಯನ್ನು ಹೊಂದಿದ್ದಾರೆ.ಮಂಜುನಾಥ್, ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಾಮರಾಜನಗರ ದಮನಿತ ಮಹಿಳೆಯರಿಗೆ ನೀಡುವ ಆರ್ಥಿಕ ನೆರವು ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಹಾಯಧನವನ್ನು ಹೆಚ್ಚಳ ಮಾಡಬೇಕೆಂದು ಒತ್ತಾಯ ಮಾಡುತ್ತೇನೆ.ಚಂದ್ರಶೇಖರ ಪಾಟೀಲ್, ಸಿಇಒ ಸ್ನೇಹ ಜ್ಯೋತಿ ಸಂಸ್ಥೆ, ಚಾಮರಾಜನಗರ ಸಮಾಜದಲ್ಲಿ ಶೋಷಣೆಗೆ ಒಳಗಾದವರೆಂದರೆ ಅದು ದಮನಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ಎಚ್‌ಐವಿ ಪೀಡಿತರು. ಈ ಮೂವರಿಗೂ ಸರ್ಕಾರದಿಂದ ನೀಡುವ ಆರ್ಥಿಕ ನೆರವು ಯಾವುದಕ್ಕೂ ಸಾಲುವುದಿಲ್ಲ. ಇದನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿ ಬರಲೂ ಆಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಆರ್ಥಿಕ ನೆರವಿನ ಪ್ರಮಾಣವನ್ನು ಹೆಚ್ಚಳ ಮಾಡಬೇಕು.ದೀಪಾ ಬುದ್ಧೆ, ಅಧ್ಯಕ್ಷೆ, ಸಮತಾ ಸೊಸೈಟಿ, ಚಾಮರಾಜನಗರ