ಚಾಮರಾಜನಗರ: ಸತ್ಯಮಂಗಲಂ ರಾಷ್ಟ್ರೀಯ ಹೆದ್ದಾರಿಯ ಹರದನಹಳ್ಳಿ ಹಾಗೂ ಅಂಕನಶೆಟ್ಟಿಪುರ ಗ್ರಾಮದ ಮಧ್ಯೆ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಶನಿವಾರ ರಾತ್ರಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲೂಕಿನ ಅಟ್ಟಗೂಳಿಪುರ ಗ್ರಾಮದ ಚೆನ್ನನಂಜಸ್ವಾಮಿ(25) ಮೃತ ದುರ್ದೈವಿ. ಈತ ಜಿಲ್ಲಾಡಳಿತ ಭವನದ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಹೊರಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದನು. ಶನಿವಾರ ಸಂಜೆ ಕೆಲಸ ಮುಗಿಸಿ ಊರಿಗೆ ಹೋಗುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಚಾಮರಾಜನಗರ ಸಂಚಾರ ಠಾಣೆಯ ಪೊಲೀಸರು ಮೃತದೇಹವನ್ನು ಸಿಮ್ಸ್‌ನಲ್ಲಿರುವ ಶವಗಾರಕ್ಕೆ ರವಾನಿಸಿ, ಅಪಘಾತ ನಡೆಸಿ ಪರಾರಿಯಾಗಿದ್ದ ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದ್ದು, ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.