ಶಾಸಕ ಮುನಿರತ್ನ ವಿರುದ್ಧ ಪ್ರತಿಭಟನೆ

15rajesh1
Published on

ಚಾಮರಾಜನಗರ: ಬಿಬಿಎಂಪಿ ಗುತ್ತಿಗೆದಾರರಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿರುವ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಭಾನುವಾರ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಶಾಸಕ ಮುನಿರತ್ನ ವಿರುದ್ಧ ೋಷಣೆ ಕೂಗಿ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಮುನಿರತ್ನ ಅವರ ಭಾವಚಿತ್ರವನ್ನು ದಹಿಸುವುದರ ಮೂಲಕ ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ರಾಮಸಮುದ್ರ ಸುರೇಶ್ ಮಾತನಾಡಿ, ಬಿಬಿಎಂಪಿ ಗುತ್ತಿಗೆದಾರರ ಬಳಿ ಲಂಚ ಬೇಡಿಕೆ ವಿಚಾರವಾಗಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಮಾತನಾಡುತ್ತ ಅವಾಚ್ಯ ಶಬ್ಧಗಳಿಂದ ಮಾತನಾಡಿದ್ದಾರೆ. ಈ ವೇಳೆ ವಿನಾಃಕಾರಣ ದಲಿತ ಸಮುದಾಯವನ್ನು ಮಧ್ಯೆ ಎಳೆದು ತಂದು ಅವಮಾನ ಮಾಡಿದ್ದಾರೆ. ಅದಲ್ಲದೇ ಬಹಳ ಕೀಳುಮಟ್ಟದಲ್ಲಿ ಮಹಿಳೆಯನ್ನು ಅವಮಾನಿಸಿ ಮಾತನಾಡಿದ್ದಾರೆ ಎಂದು ದೂರಿದರು.

ಶಾಸಕ ಮುನಿರತ್ನ ಅವರು ದೊಡ್ಡಮಟ್ಟದ ಭ್ರಷ್ಟಚಾರದಲ್ಲಿ ಸಿಲುಕಿರುವುದು ಇದರಿಂದ ಸಾಬೀತಾಗಿದೆ. ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಎಂಬುವರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡುವ ಮೂಲಕ ಗುತ್ತಿಗೆದಾರನ ಪತ್ನಿ, ತಾಯಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಅದಲ್ಲದೇ ದಲಿತ ಸಮುದಾಯವನ್ನು ಅವಮಾನ ಮಾಡಿರುವ ಮುನಿರತ್ನ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ರದ್ದುಗೊಳಿಸಬೇಕು. ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಯರಿಯೂರು ಸಿ.ರಾಜಣ್ಣ, ಕೆ.ಎಂ.ನಾಗರಾಜು, ಗುಂಡ್ಲುಪೇಟೆ ನಂಜುಂಡಸ್ವಾಮಿ, ಮಾಡ್ರಳ್ಳಿ ರಂಗಸ್ವಾಮಿ, ಶಾಂತರಾಜು, ಮರಿಯಾಲದಹುಂಡಿ ಕುಮಾರ, ಅಣಗಳ್ಳಿ ಬಸವರಾಜು, ನಾಗಶೇಖರ್, ಸಿ.ಎಂ.ಶಿವಣ್ಣ, ಕಾಡಳ್ಳಿ ನಾಗರಾಜು, ಶಿವಕುಮಾರ್, ವರದರಾಜು ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net