ಸಮುದಾಯಗಳ ಸ್ಮಶಾನ ಬಿಡಿಸಿಕೊಡಲು ಆಗ್ರಹ

Published on

ಚಾಮರಾಜನಗರ : ಉಪ್ಪಾರ ಮತ್ತು ನಾಯಕ ಸಮುದಾಯಗಳಿಗೆ ಸೇರಿದ ಸ್ಮಶಾನ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಎರಡು ಸಮುದಾಯಗಳಿಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಮಸಣಾಪುರ ಗ್ರಾ.ಪಂ. ಸದಸ್ಯ ವಿ.ಮಹೇಶ್ ಆರೋಪಿಸಿದರು.

ತಾಲೂಕಿನ ಮಸಣಾಪುರ ಗ್ರಾಮದ ನಾಯಕ ಮತ್ತು ಉಪ್ಪಾರ ಸಮುದಾಯದವರು ತಲತಲಾಂತರದಿಂದ ಗ್ರಾಮದ ಸರ್ವೆ ನಂ.19/6ರಲ್ಲಿ 27 ಗುಂಟೆ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ನಾಯಕ ಸಮುದಾಯದ ಲೇ.ದೊಡ್ಡನಾಯಕರ ಪತ್ನಿ ವೀರಮ್ಮ ಮಕ್ಕಳಾದ ಡಿ.ಪ್ರೇಮಾ, ಡಿ.ವಿಜಯ, ಡಿ.ಸ್ವಾಮಿ ಎಂಬುವವರು ಈ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ತಂತಿಬೇಲಿ ಹಾಕಿ ತೊಂದರೆ ನೀಡುತ್ತಿದ್ದಾರೆ ಎಂದು ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈ ಸಂಬಂಧ ಯಳಂದೂರು ತಹಸೀಲ್ದಾರ್, ಪೊಲೀಸ್ ಠಾಣೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವು. ಅದರಂತೆ ತಹಸೀಲ್ದಾರ್ ನೇತೃತ್ವದಲ್ಲಿ ಸರ್ವೆ ಇಲಾಖೆ ಅಧಿಕಾರಿ ಜಾಗ ಗುರುತಿಸಿ ಗುರುತಿನ ಕಲ್ಲು ನೆಟ್ಟಿ ಒತ್ತುವರಿದಾರರಿಗೆ ಸೂಚನೆ ನೀಡಿ ಹೋಗಿದ್ದರು.

ಆದರೂ, ಒತ್ತುವರಿದಾರರು ಗುರುತಿನ ಕಲ್ಲು ಕಿತ್ತು, ಮತ್ತೆ ಒತ್ತುವರಿ ಮಾಡಿಕೊಂಡಿದ್ದಾರೆ. ಸ್ಮಶಾನಕ್ಕಾಗಿ ಹೋರಾಟ ಮಾಡುವ ನಮ್ಮಗಳ ಮೇಲೆ ಇಲ್ಲಸಲ್ಲದ ದೂರುಗಳನ್ನು ನೀಡಿ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಎರಡು ಸಮುದಾಯದವರಿಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಉಪ್ಪಾರ ಸಮುದಾಯದ ಮುಖಂಡ ಶ್ರೀನಿವಾಸ್, ಶಂಕರನಾಯಕ, ಬಿಳಿಗಿರಿರಂಗನಾಯಕ, ವೆಂಕಟರಂಗಸ್ವಾಮಿನಾಯಕ, ಕೃಷ್ಣಶೆಟ್ಟಿ, ರುದ್ರನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net