ಹನೂರು: ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದ ಜಮೀನೊಂದರಲ್ಲಿ ವಾರದ ಹಿಂದಷ್ಟೇ ಚಿರತೆ ದಾಳಿಗೆ ಮೇಕೆಯೊಂದು ಬಲಿಯಾಗಿರುವ ಘಟನೆ ಮಾಸುವ ಮುನ್ನವೇ ಗುರುವಾರ ರಾತ್ರಿ ಸಮೀಪದ ಗಂಗನದೊಡ್ಡಿ ಗ್ರಾಮದ ಜಮೀನಿನಲ್ಲಿ ಚಿರತೆ ದಾಳಿಗೆ ಮತ್ತೊಂದು ಮೇಕೆ ಬಲಿಯಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ.
ಈ ಭಾಗದಲ್ಲಿ ಕಳೆದ ಹಲವು ತಿಂಗಳಿನಿಂದ ಚಿರತೆಯೊಂದರ ಹಾವಳಿ ಹೆಚ್ಚಾಗಿದ್ದು, ಜಮೀನುಗಳಿಗೆ ಲಗ್ಗೆ ಇಟ್ಟು ಮೇಕೆಗಳನ್ನು ಬಲಿ ಪಡೆಯುತ್ತಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ರೈತರು ಹಲವು ಬಾರಿ ಮನವಿ ಮಾಡಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮವಹಿಸಿಲ್ಲ. ಇದರಿಂದ ಸೆ.3 ರಂದು ಬಸಪ್ಪನ ದೊಡ್ಡಿ ಗ್ರಾಮದ ಶೇಖ್ ಅನ್ಸರ್ ಅವರ ಜಮೀನಿಗೆ ಲಗ್ಗೆ ಇಟ್ಟ ಚಿರತೆ ಮೇಕೆಯನ್ನು ಬಲಿ ಪಡೆದಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ರೈತರು ತೀವ್ರವಾಗಿ ಒತ್ತಾಯಿಸಿದ್ದರು. ಈ ಹಿನ್ನೆಲೆ ಚಿರತೆ ಸೆರೆಗೆ ಬೋನು ಅಳವಡಿಸಿ 10 ದಿನಗಳು ಕಳೆದಿವೆ. ಆದರೆ, ಇದೀಗ ಗಂಗನದೊಡ್ಡಿ ಗ್ರಾಮದ ತಂಗವೇಲು ಎಂಬುವರ ಜಮೀನಿನ ಕೊಟ್ಟಿಗೆಗೆ ನುಗ್ಗಿರುವ ಚಿರತೆ ಮೇಕೆಯನ್ನು ಬಲಿ ಪಡೆದಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ. ಬಸಪ್ಪನದೊಡ್ಡಿಯಲ್ಲಿ ಇರಿಸಲಾಗಿರುವ ಬೋನಿಗೆ ಚಿರತೆ ಬೀಳದೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಿ ಈ ಭಾಗದ ಇನ್ನಿತರ ಕಡೆಗಳಲ್ಲೂ ಬೋನು ಅಳವಡಿಸುವುದರ ಜತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಮನುಷ್ಯರ ಮೇಲೆ ದಾಳಿ ನಡೆಸಿ ಅನಾಹುತ ಸಂಭವಿಸುವ ಮುನ್ನವೇ ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆ ಹಿಡಿಯುವಂತೆ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಒತ್ತಾಯಿಸಿದ್ದಾರೆ.