

ಚಾಮರಾಜನಗರ: ಚಾಮರಾಜನಗರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿ ಚುನಾವಣೆಗೆ ಗೈರಾದ ಕಾಂಗ್ರೆಸ್‌ನ ನಾಲ್ವರು ಸದಸ್ಯರ ವಗೈರೆಗಳಲ್ಲಿ ಗಂಭೀರ ತಕರಾರುಗಳಿವೆ.
ಬಹುಮತವಿದ್ದರೂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿಲ್ಲ. ಪಕ್ಷದ ಸದಸ್ಯರಾದ ಆರ್.ಪಿ.ನಂಜುಂಡಸ್ವಾಮಿ, ಭಾಗ್ಯಮ್ಮ, ನೀಲಮ್ಮ ಚುನಾವಣೆಗೆ ಗೈರಾದರು. ಮತ್ತೊಬ್ಬ ಸದಸ್ಯೆ ಚಂದ್ರಕಲಾ ಬಿಜೆಪಿ ಪರ ಮತ ಹಾಕಿದರು. ಇವರ ನಡೆಯ ಹಿಂದೆ ವ್ಯವಹಾರಿಕ ರಾಜಕಾರಣವಿತ್ತು ಎಂಬ ಚರ್ಚೆಗಳು ಗಾಳಿಯಷ್ಟೇ ವೇಗವಾಗಿ ಹಬ್ಬಿಬಿಟ್ಟಿದೆ. ಆದರೆ, ಗೈರಾದ ಸದಸ್ಯರಲ್ಲಿ ಮೂವರ ಕಡೆಯಿಂದ ಇದರ ಹೊರತಾದ ವಿಷಯಗಳೂ ಇವೆ ಎನ್ನುವ ವಾದವಿದೆ. ಇದಕ್ಕೆಲ್ಲ ಶಾಸಕ ಮತ್ತು ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿಯೂ ಕಾರಣ ಎಂದು ಇಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಯಾರು ಏನಂದ್ರು?: ಚಾ.ನಗರ ನಗರಸಭೆ ಚುನಾವಣೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವುದೋ ಅಥವಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಜಪ್ಪನನ್ನು ಸೋಲಿಸುವುದೋ ನನ್ನ ಉದ್ದೇಶವಾಗಿರಲಿಲ್ಲ. ಇದಕ್ಕೆ ನಮ್ಮ ಶಾಸಕರೇ ಮುಖ್ಯ ಕಾರಣ ಎಂದು ಚುನಾವಣೆಗೆ ಗೈರಾಗಿದ್ದ ನಗರಸಭೆ ಕಾಂಗ್ರೆಸ್ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ದೂರಿದ್ದಾರೆ.
‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ನಮ್ಮ ಕೆಲಸ-ಕಾರ್ಯಗಳು ಶಾಸಕರ ಮಟ್ಟದಲ್ಲಿ ಆಗುತ್ತಿರಲಿಲ್ಲ. ವಿಶ್ವಾಸಯುತವಾಗಿ ನಡೆಸಿಕೊಳ್ಳಲಿಲ್ಲ, ಜತೆಗೆ ಕರೆದುಕೊಂಡು ಹೋಗಲಿಲ್ಲ. ಹಿಂದಿನ ಎರಡು ಅವಧಿಗಳಿಗಿಂತ ಈ ಅವಧಿಯಲ್ಲಿ ನನ್ನ ವಾರ್ಡ್‌ಗೆ ಸರ್ಕಾರದಿಂದ ಸರಿಯಾಗಿ ಅನುದಾನವೂ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದಿಗೂ ನನ್ನ ವಾರ್ಡ್‌ನಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಈ ವಿಚಾರವಾಗಿ ಶಾಸಕರನ್ನು ಕೇಳಿಕೊಂಡಾಗಲೂ ಅವರು ಕನಿಷ್ಠ ಪಕ್ಷ ಬಾಂಧವ್ಯದ ಮಾತುಗಳನ್ನೂ ಆಡುತ್ತಿರಲಿಲ್ಲ. ಅವರ ಯಾವ ಭೇಟಿಯೂ ಖುಷಿಯಿಂದ ಕೂಡಿರಲಿಲ್ಲ. ನಮ್ಮ ಶಾಸಕರಿಂದ ನಮ್ಮ ಕೆಲಸ ಆಯ್ತು ಎಂದು ಯಾವತ್ತೂ ಅನಿಸಿಲ್ಲ. ಎರಡು ಅವಧಿಯಲ್ಲಿ ಅವರ ಜತೆಗೆ ನಿಂತು ಚುನಾವಣೆಯಲ್ಲಿ ಗೆಲ್ಲಿಸಿದ್ದೇವೆ. ಆದರೆ, ಒಂದು ಸಲವೂ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಎಂಪಿ ಚುನಾವಣೆ ಸಂದರ್ಭದಲ್ಲೂ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ದೂರಿದರು.
ಕಳೆದ ಸಲ ನಗರಸಭೆ ಚುಕ್ಕಾಣಿ ಹಿಡಿಯಲು ಸಾಧ್ಯವಾಗಲಿಲ್ಲ. ಈ ಸಲವಾದರೂ ಭದ್ರಬುನಾದಿ ಹಾಕಿ ಎಂದು ಸಭೆಯೊಂದರಲ್ಲಿ ಶಾಸಕರಿಗೆ ಸಲಹೆ ನೀಡಿದರೆ ಅವರು, ‘ನೀವು ಗೆಲ್ಲದಿದ್ದರೆ ನನ್ನ ಕಿರೀಟ ಬಿದ್ದು ಹೋಗುತ್ತಾ’..ಎಂದುಬಿಟ್ಟರು. ಹೀಗಾಗಿ ಇದಕ್ಕೆಲ್ಲ ಕಾಂಗ್ರೆಸ್ ಪಕ್ಷ ಅಥವಾ ರಾಜಪ್ಪ ಕಾರಣರಲ್ಲ, ಶಾಸಕರೇ ನೇರ ಹೊಣೆ. ಇದನ್ನೆಲ್ಲ ಪಕ್ಷ ಅರ್ಥ ಮಾಡಿಕೊಂಡು ಗೌರವಯುತವಾಗಿ ನಡೆಸಿಕೊಂಡರೆ ಪಾರ್ಟಿಯಲ್ಲೇ ಇರುತ್ತೇನೆ. ಪಕ್ಷ ಏನಾದರೂ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಿದರೆ ಏನು ಮಾಡುವುದಕ್ಕೆ ಆಗಲ್ಲ. ನಾನೂ ಕಾನೂನು ಸಮರ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಚುನಾವಣೆಯಲ್ಲಿ ಗೈರಾಗಿದ್ದ ಸದಸ್ಯೆ ನೀಲಮ್ಮ ಮಾತನಾಡಿ, ನಾವು ಗೈರಾಗುವುದಕ್ಕಾಗಿ ಬಿಜೆಪಿಯವರ ಬಳಿ ಹಣ ತೆಗೆದುಕೊಂಡಿಲ್ಲ. ಈ ರೀತಿ ದುಡ್ಡು ಮಾಡುವುದಿದ್ದರೆ ಹಳೆಯ ಮನೆಯಲ್ಲೇ ಇಂದಿಗೂ ವಾಸ ಮಾಡುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕವಾಗಿ ಇದ್ದೇವೆ. ನಮಗೆ ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಹೇಳಿದ್ದಾರೆ.
ನಾನು ಮತ್ತು ನನ್ನ ಅಣ್ಣ ಮಹದೇವಯ್ಯ ಸೇರಿ ಒಟ್ಟು 3 ಬಾರಿ ನಗರಸಭೆ ಚುನಾವಣೆಯಲ್ಲಿ ಗೆದ್ದಿದ್ದೇವೆ. ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿದರೂ ನಮ್ಮ ಮನವಿಗಳನ್ನು ಪರಿಗಣಿಸುತ್ತಿರಲಿಲ್ಲ. ವಾರ್ಡ್‌ನಲ್ಲಿ ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ಒಡೆದು ಹಾಕಲಾಯಿತು. ನಾನು ಡಿಸಿ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಕೊಟ್ಟು ವಾಟರ್ ಟ್ಯಾಂಕ್ ಬೇಕು ಎಂದು ಕೋರಿದ್ದೆ. ಗ್ರಾಮ ದೇವತೆ ದೇಗುಲವಿರುವ ರಸ್ತೆ ಅಭಿವೃದ್ಧಿಗೆ ಅನುದಾನ ಕೋರಿದೆ. ಶಾಸಕರು ಸರಿಯಾಗಿ ಸ್ಪಂದಿಸಲಿಲ್ಲ. ವಾರ್ಡ್‌ನ ಪ್ರಗತಿಗೆ ಸಹಕಾರ ನೀಡದೆ, ಮೂಲಸೌಕರ್ಯಗಳನ್ನು ಒದಗಿಸಿಕೊಡದೆ ಇರುವುದಕ್ಕೆ ಬೇಸರವಾಗಿದೆ ಎಂದಿದ್ದಾರೆ.
ಚುನಾವಣೆ ದಿನ ನಾನು ಎಲ್ಲೂ ಹೋಗಿರಲಿಲ್ಲ. ನನ್ನ ಅಣ್ಣ, ನಗರಸಭೆ ಮಾಜಿ ಸದಸ್ಯ ಮಹದೇವಯ್ಯಗೆ ಮಧುಮೇಹ ಹೆಚ್ಚಾಗಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ನೋಡಿಕೊಳ್ಳುತ್ತಿದ್ದೆ. ಆಸ್ಪತ್ರೆಯಲ್ಲಿದ್ದ ಕಾರಣ ಬೇರೆಯವರಿಗೆ ಕಿರಿಕಿರಿ ಆಗಬಾರದು ಎಂದು ೆನ್ ಸ್ವಿಚ್ ಆ್ ಮಾಡಿದ್ದೆ. ನಾವು ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದಿದ್ದೇವೆ. ಈ ಚುನಾವಣೆ ಸಂದರ್ಭದಲ್ಲಿ ನಮಗೆ ತೊಂದರೆ ಇದ್ದಿದ್ದಕ್ಕೆ ತಟಸ್ಥರಾಗಿದ್ದೆವು ಎಂದು ಪಕ್ಷ ಪರಿಗಣಿಸಿದರೆ ಉತ್ತಮ. ಇಲ್ಲದಿದ್ದರೆ ಇಲ್ಲ ಎಂದು ತಿಳಿಸಿದ್ದಾರೆ.
ಗೈರಾಗಲು ಅನಾರೋಗ್ಯವೇ ಕಾರಣ:
ಗೈರಾಗಿದ್ದ ಮತ್ತೊಬ್ಬ ಸದಸ್ಯೆ ಭಾಗ್ಯಮ್ಮ ಮಾತನಾಡಿ, ನನಗೆ ಕಳೆದ 15 ದಿನಗಳಿಂದ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಬುಧವಾರ ಆಸ್ಪತ್ರೆಯಿಂದ ಮನೆಗೆ ಬಂದೆ. ಹೀಗಾಗಿ, ಅನಾರೋಗ್ಯದ ಕಾರಣ ಚುನಾವಣೆಗೆ ಹಾಜರಾಗಲು ಸಾಧ್ಯವಾಗಲೇ ಇಲ್ಲ ಎಂದು ತಿಳಿಸಿದ್ದಾರೆ.
ಗೈರಾಗಿರುವುದಕ್ಕೆ ಕಾರಣ ಕೇಳಿ ಪಕ್ಷದಿಂದ ನನಗೆ ನೋಟಿಸ್ ನೀಡಲಾಗಿದೆ. ನನಗೆ ಆಗಿರುವ ಸಮಸ್ಯೆಯನ್ನು, ಇರುವ ವಿಚಾರವನ್ನು ಹೇಳಿಕೊಂಡಾಗಷ್ಟೇ ಪಕ್ಷದವರಿಗೆ ಗೊತ್ತಾಗೋದು. ವೈದ್ಯರಿಗೆ ತೋರಿಸಿರುವ ಚೀಟಿಗಳೆಲ್ಲ ನನ್ನ ಬಳಿ ಇವೆ. ನೋಟಿಸ್‌ಗೆ ಉತ್ತರ ನೀಡುತ್ತೇನೆ. ಇಲ್ಲದಿದ್ದರೆ ನನ್ನ ಮೇಲೆ ಅಪಾರ್ಥವಾಗುತ್ತದೆ. ಪಕ್ಷ ನಮ್ಮದಾಗಿರುವಾಗ ನಾನ್ಯಾಕೆ ಮತ್ತೊಂದು ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿ ಎಂದು ಪ್ರಶ್ನಿಸಿದ್ದಾರೆ.
ಸಂಪರ್ಕಕ್ಕೆ ಸಿಗದ ಚಂದ್ರಕಲಾ:
ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದ ಕಾಂಗ್ರೆಸ್ ಸದಸ್ಯೆ ಚಂದ್ರಕಲಾ ೆನ್ ಸಂಪರ್ಕಕ್ಕೆ ಸಿಗಲಿಲ್ಲ. ಅವರ ಪತಿ ಮಂಜು ಮಾತನಾಡಿ, ಚಂದ್ರಕಲಾ ಮೈಸೂರಿಗೆ ಹೋಗಿದ್ದಾರೆ. ಚುನಾವಣೆಯಲ್ಲಿ ನಡೆದ ಬೆಳವಣಿಗೆ ಕುರಿತು ಅವರ ಬಳಿ ಕೇಳಿ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ.
ವಿಪ್ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಭಾಗ್ಯಮ್ಮ ಅವರಿಗೆ ಪಕ್ಷದಿಂದ ನೋಟಿಸ್ ನೀಡಲಾಗಿದೆ. ಇದಕ್ಕೆ ಉತ್ತರ ನೀಡುವುದಾಗಿ ಭಾಗ್ಯಮ್ಮ ತಿಳಿಸಿದ್ದಾರೆ. ನೀಲಮ್ಮ ಮತ್ತು ಆರ್.ಪಿ.ನಂಜುಂಡಸ್ವಾಮಿ ಅವರಿಗೆ ಇನ್ನೂ ನೋಟಿಸ್ ನೀಡಿಲ್ಲ ಎಂದು ತಿಳಿದುಬಂದಿದೆ.
ನಾಲ್ವರೂ ಸದಸ್ಯರ ನಡೆಯ ಹಿಂದಿನ ಕಾರಣಗಳು ಎಲ್ಲರಿಗೂ ಗೊತ್ತಿದೆ. ಅವರ ಪರಿಸ್ಥಿತಿಗಳೇ ಬೇರೆ ಇದೆ. ಆರ್.ಪಿ.ನಂಜುಂಡಸ್ವಾಮಿಗೆ ನನ್ನಿಂದ ಅನ್ಯಾಯವಾಗಿದ್ದರೆ ಚುನಾವಣೆಗೂ ಮೊದಲೇ ನಡೆದಿದ್ದ ಸಭೆಯಲ್ಲೇ ಹೇಳಬೇಕಿತ್ತಲ್ಲವೇ?. ಸಭೆಯಲ್ಲಿ ನೀಲಮ್ಮನ ಅಣ್ಣ ಮಹದೇವಯ್ಯ ಹಾಗೆ-ಹೀಗೆ ಎನ್ನುತ್ತಿದ್ದ. ಆಗ ನಾನು ತರಾಟೆಗೆ ತೆಗೆದುಕೊಂಡಿದ್ದೆ. ಬಿಜೆಪಿಯವರು ಭಾಗ್ಯಮ್ಮನನ್ನು ಸಂಪರ್ಕ ಮಾಡಿದ್ದಾಗ ಆರೋಗ್ಯವಾಗಿದ್ದರಾ?, ಚಂದ್ರಕಲಾ ಬಂದು ಬಿಜೆಪಿಗೆ ಮತವನ್ನು ಹಾಕಲಿಲ್ಲವೇ?, ಇವರಿಗೆಲ್ಲ ರಾಜಕೀಯ ಗಂಧ-ಗಾಳಿ ಗೊತ್ತಿಲ್ಲ. ವಿನಾಕಾರಣ ನನ್ನ ವಿರುದ್ಧ ಬೇಕು ಅಂತಲೇ ಆರೋಪ ಮಾಡುತ್ತಿದ್ದಾರೆ.ಸಿ.ಪುಟ್ಟರಂಗಶೆಟ್ಟಿ, ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ, ಚಾಮರಾಜನಗರ