

ಗುಂಡ್ಲುಪೇಟೆ: ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಐವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಮಾಡುವಂತೆ ಬಿಜೆಪಿ ನಿಯೋಗ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಇಂದಿನಿಂದ ಕಾನೂನು ಹೋರಾಟ ಆರಂಭಿಸಿದೆ.
ಗುರುವಾರ ಪುರಸಭೆಯ ಮಾಜಿ ಅಧ್ಯಕ್ಷ ಪಿ.ಗಿರೀಶ್ ನೇತೃತ್ವದಲ್ಲಿ ಪುರಸಭೆ ಕಚೇರಿಗೆ ತೆರಳಿದ ಬಿಜೆಪಿ ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿ ಅಧ್ಯಕ್ಷರಾದ ಕಿರಣ್‌ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್, ಅವರಿಗೆ ಬೆಂಬಲ ನೀಡಿದ ಸದಸ್ಯರಾದ ವೀಣಾ, ರಮೇಶ್, ಲಕ್ಷ್ಮೀದೇವಿ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಮುಖ್ಯಾಧಿಕಾರಿ ವಸಂತಕುಮಾರಿ ಅವರ ಮೂಲಕ ಅರ್ಜಿ ಸಲ್ಲಿಸಿದರು.
ಇದಕ್ಕೂ ಮೊದಲು ಮಾಜಿ ಅಧ್ಯಕ್ಷ ಪಿ.ಗಿರೀಶ್ ವಕೀಲರು ಹಾಗೂ ಮುಖಂಡ ಎಲ್. ಸುರೇಶ್ ಜತೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಹುಮತ ಇಲ್ಲದಿದ್ದರೂ ಕಾಂಗ್ರೆಸ್, ಬಿಜೆಪಿ ಸದಸ್ಯರನ್ನು ಹೆದರಿಸಿ ಆಮಿಷವೊಡ್ಡಿ ಅಪಹರಿಸಿ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿಯ ಐದು ಸದಸ್ಯರು ವಿಪ್ ಉಲ್ಲಂಘಿಸಿದ್ದು ಈ ಬಗ್ಗೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಅವರ ಸದಸ್ಯತ್ವ ರದ್ದುಗೊಳಿಸುವಂತೆ ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಾನೂನು ಬಹಳ ಪರಿಣಾಮಕಾರಿಯಾಗಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿ ಅರ್ಜಿ ಸ್ವೀಕರಿಸಿದ 30 ದಿನಗಳಲ್ಲಿ ಪಕ್ಷಾಂತರ ಮಾಡಿದ ಸದಸ್ಯರ ಸದಸ್ಯತ್ವ ರದ್ದುಗೊಳಿಸಲಿದ್ದಾರೆ. ಅಕಸ್ಮಾತ್ ಅಧಿಕಾರಿಗಳು ಪ್ರಭಾವಿಗಳ ಪ್ರಭಾವದಿಂದ ಕಾನೂನು ಕ್ರಮಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆಹೋಗಿ ನ್ಯಾಯ ಪಡೆಯಲಾಗುವುದು ಎಂದು ತಿಳಿಸಿದರು. ಸದಸ್ಯರಾದ ನಾಗೇಶ್, ಕುಮಾರ್, ರಂಗಾಸ್ವಾಮಿ, ದೀಪಿಕಾ, ಪಟ್ಟಾಭಿ, ಮಹದೇವಮ್ಮ, ಸಾಜಿದಾ ಬೇಗಂ ಇದ್ದರು.