

ಹನೂರು: ತಾಲೂಕಿನ ರಾಮಾಪುರ ವನ್ಯಜೀವಿ ವಲಯದ ಮುತ್ತುಶೆಟ್ಟಿಯೂರು ಗಸ್ತಿನ ರಾಮಾಪುರ ಗ್ರಾಮ ಸಮೀಪದ ಜಮೀನಿನಲ್ಲಿ ಮಂಗಳವಾರ ಜಿಂಕೆ ಮಾಂಸವನ್ನು ಬೇರ್ಪಡಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ರಾಮಾಪುರ ಗ್ರಾಮದ ಕೃಷ್ಣಮೂರ್ತಿ ಆಲಿಯಾಸ್ ಮುತ್ತು ಹಾಗೂ 17 ವರ್ಷದ ಬಾಲಕ ಬಂಧಿತ ಆರೋಪಿಗಳು. ಈ ಇಬ್ಬರು ಗೆಜ್ಜಲನತ್ತ ಗ್ರಾಮದ ಆರ್ಮುಗಂ ಜತೆಗೂಡಿ ಮಂಗಳವಾರ ಜಿಂಕೆಯನ್ನು ಬೇಟೆಯಾಡಿ ಮಾರಾಟ ಮಾಡಲು ಮಾಂಸವನ್ನು ಬೇರ್ಪಡಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆರ್‌ಎಫ್‌ಒ ಸುಂದರ್, ಡಿಆರ್‌ಎಫ್‌ಒ ಮಧುಕುಮಾರ್, ಅರಣ್ಯ ಪಾಲಕರಾದ ಬಿಲ್ಲಪ್ಪ, ಗಣೇಶ್‌ಪ್ರಸಾದ್, ಬೀರಪ್ಪಹಳ್ಳಿ ಹಾಗೂ ಕಳ್ಳಬೇಟೆ ಶಿಬಿರದ ಸಿಬ್ಬಂದಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದರು.
ಈ ವೇಳೆ ಜಿಂಕೆ ಮಾಂಸ, ಉರುಳು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ತಲೆಮರೆಸಿಕೊಂಡಿರುವ ಆಮುರ್ಗಂ ಪತ್ತೆಗೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.