

ಚಾಮರಾಜನಗರ: ಜಿಲ್ಲೆಯಲ್ಲಿ ಕಾಡಂಚಿನ ಮತ್ತು ಗುಡ್ಡಗಾಡು ಪ್ರದೇಶದ ಗ್ರಾಮಗಳ ಜನರು ಮಾತ್ರ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿಲ್ಲ. ಜಿಲ್ಲಾ ಕೇಂದ್ರದಲ್ಲಿರುವ ಪ್ರಮುಖ ಬೀದಿಯ ನಿವಾಸಿಗಳೂ ಜೀವಜಲಕ್ಕಾಗಿ ಪರದಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಮಲೆ ಮಹದೇಶ್ವರ ಬೆಟ್ಟದ ಮೆಂದಾರೆಯಲ್ಲಿ ಗ್ರಾಮಸ್ಥರು ಕುಡಿಯುವ ನೀರಿಗೆ ಪರಿತಪಿಸಿದ್ದರು. ಮೆಂದಾರೆ ಗುಡ್ಡಗಾಡು ಪ್ರದೇಶ. ಇಲ್ಲಿಗೆ ನೀರಿನ ಸೌಲಭ್ಯ ಒದಗಿಸುವುದು ಕಷ್ಟವೆಂದು ಹೇಳಬಹುದು. ಆದರೆ ನಾಚಿಕೆಗೇಡಿನ ಸಂಗತಿ ಏನೆಂದರೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಇರುವ ರಸ್ತೆಯಲ್ಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ನಗರದ ದೇವಾಂಗ ಬೀದಿಯ(11ನೇ ವಾರ್ಡ್) 1ನೇ ಕ್ರಾಸ್‌ನಲ್ಲಿ (ಚೌಡೇಶ್ವರಿ ದೇವಸ್ಥಾನದದ ಹತ್ತಿರ) ಕುಡಿಯುವ ನೀರಿನ ತತ್ವರ ಎದುರಾಗಿದೆ. ಇಲ್ಲಿನ ನಿವಾಸಿಗಳು ಹೇಳುವ ಪ್ರಕಾರ, ಈ ಬೀದಿಯಲ್ಲಿ 90ಕ್ಕೂ ಹೆಚ್ಚು ಮನೆಗಳಿವೆ. ನಲ್ಲಿ ನೀರು 15 ದಿನಕ್ಕೊಮ್ಮೆ ಬರುತ್ತಿದೆ. ಬೀದಿಯಲ್ಲಿ ಬೋರ್‌ವೆಲ್ ನೀರು, ತೊಂಬೆ ನಲ್ಲಿ ಸೌಲಭ್ಯವಿಲ್ಲ. ಈ ಬಗ್ಗೆ ನಗರಸಭೆ ಸದಸ್ಯ ಮಂಜುನಾಥ್ ಹೇಳುವುದೇನೆಂದರೆ ಇಲ್ಲಿ ಅಂತರ್ಜಲ ಮಟ್ಟ ಕುಸಿದುಹೋಗಿದ್ದು, ಎರಡು ಬಾರಿ ಬೋರ್‌ವೆಲ್ ಕೊರೆಸಿದ್ದರೂ ವಿಲವಾಗಿದೆಯಂತೆ. ಇಲ್ಲಿನ ನಿವಾಸಿಗಳು ಅನಿವಾರ್ಯವಾಗಿ ಕುಡಿಯುವ ನೀರಿಗಾಗಿ ಕ್ಯಾನ್ ಹಿಡಿದು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಹೋಗುತ್ತಿದ್ದಾರೆ. ಹಣ ಕೊಟ್ಟು ಮನೆಗೆ ನೀರಿನ ಕ್ಯಾನ್ ಹಾಕಿಸಿಕೊಳ್ಳುತ್ತಿದ್ದಾರೆ.
ಬೋರಲು ಬಿದ್ದ ಬೋರ್‌ವೆಲ್‌ಗಳು: 11ನೇ ವಾರ್ಡ್‌ನ 1ನೇ ಬೀದಿಯಲ್ಲಿರುವ ಎರಡು ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗಿವೆ. ಬೋರ್‌ವೆಲ್‌ಗೆ ಹಾಕಿದ್ದ ಕಬ್ಬಿಣದ ಪೈಪ್‌ಗಳು ತುಕ್ಕು ಹಿಡಿದಿವೆ. ಒಂದು ತೊಂಬೆ ನಲ್ಲಿ ಜಾಗ ಕಸ ಹಾಕುವ ಸ್ಥಳವಾಗಿ ಮಾರ್ಪಟ್ಟಿದೆ. ಮತ್ತೊಂದು ಕಡೆ ತೊಂಬೆ ನಲ್ಲಿ ನಿರ್ಮಾಣಕ್ಕೆ ತಂದು ಹಾಕಿರುವ ಸಿಮೆಂಟ್ ಟ್ಯಾಂಕ್ ಇಲ್ಲೇ ಬಿದ್ದಿದೆ.
ಅಂಗಡಿಬೀದಿ ಸಮೀಪವಿರುವ ಬೋರ್‌ವೆಲ್‌ನಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಹೀಗಾಗಿ 2ನೇ ಬೀದಿಯಲ್ಲಿರುವ ಬೋರ್‌ವೆಲ್ ನೀರನ್ನೇ ಜನರು ಬಳಸುತ್ತಿದ್ದಾರೆ. ಕುಡಿಯುವ ನೀರಿಗಾಗಿಯೂ ಅಲೆದಾಟ, ಇತರೆ ಬಳಕೆಯ ಬೋರ್‌ವೆಲ್ ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ. ಮನೆಗಳಲ್ಲೇ ಬೋರ್‌ವೆಲ್ ಕೊರೆಸಿಕೊಂಡಿರುವವರಿಗೆ ಸಮಸ್ಯೆ ಇಲ್ಲ. ಆದರೆ ಈ ಸೌಲಭ್ಯವಿಲ್ಲದವರು ನೀರು ತರಲು ಬೆವರು ಹರಿಸಬೇಕಾಗಿದೆ. ಇಲ್ಲಿನ ನೀರುಗಂಟಿ ಕೂಡ ಸಾರ್ವಜನಿಕರೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ, ಗೌರವದಿಂದ ಮಾತನಾಡುವುದಿಲ್ಲ ಎಂಬ ಆರೋಪವಿದೆ.
ಸ್ಪಂದಿಸದ ನಗರಸಭೆ: ದೇವಾಂಗ ಬೀದಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದನ್ನು ಇಲ್ಲಿ ನಿವಾಸಿಗಳು ನಗರಸಭೆ ಗಮನಕ್ಕೆ ತಂದಿದ್ದಾರೆ. ಆದರೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಿಲ್ಲ. ನಗರಸಭೆ ಅಧಿಕಾರಿಗಳು ವಾಸ ಮಾಡುತ್ತಿರುವ ಮನೆಗಳಲ್ಲಿ ನೀರಿನ ತೊಂದರೆ ಉಂಟಾದರೆ ತಕ್ಷಣ ಸಮಸ್ಯೆ ಬಗೆಹರಿಯಬಹುದು. ಬಡಾವಣೆಗಳಲ್ಲಿ ನಿವಾಸಿಗಳು ಪರದಾಡುತ್ತಿದ್ದರೆ ಪರಿಹಾರ ದೊರೆಯುವುದಿಲ್ಲ. ಬೀದಿಗೆ ನೀರಿನ ಸೌಲಭ್ಯ ದೊರಕಿಸಿಕೊಡಿ ಎಂದು ಕೋರಿ ಇಲ್ಲಿನ ನಿವಾಸಿ, ವಿಜಯ್‌ಕುಮಾರ್ ಜಟ್ಟಪ್ಪ ಸ್ಥಳೀಯರ ಸಹಿ ಹಾಕಿಸಿ ಜಿಲ್ಲಾಧಿಕಾರಿಗಳಿಗೆ, ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಗಬ್ಬು ವಾಸನೆ:
ಬೀದಿಯಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ರಸ್ತೆ ಬದಿಯ ತ್ಯಾಜ್ಯದ ರಾಶಿಯಿಂದ ದುರ್ವಾಸನೆ ಬರುತ್ತಿದೆ. ಗಾಯಿತ್ರಿದೇವಿ ಮತ್ತು ಚೌಡೇಶ್ವರಿ ದೇಗುಲಗಳ ತಿರುವಿನ ಬಳಿ ಗಬ್ಬು ನಾರುತ್ತಿದೆ. ಈ ಕುರಿತು ಗುರುಸ್ವಾಮಿ ಮಾತನಾಡಿ, ದಿನ ಕಸ ತೆಗೆಯುತ್ತಿರಲಿಲ್ಲ. ನಾನು ದೂರು ಹೇಳಿದ ಬಳಿಕ ಈಗ ಬಂದು ಕಸ ತೆಗೆಯುತ್ತಿದ್ದಾರೆ. ಆದರೂ ಗಬ್ಬು ವಾಸನೆ ಹೋಗಿಲ್ಲ. ಚರಂಡಿಯಿಂದ ಕೆಟ್ಟ ವಾಸನೆ ಬರುತ್ತಿದೆ. ಇಲ್ಲೇ ಇರುವ ನಿಷ್ಕ್ರಿಯ ಬೋರ್‌ವೆಲ್ ಬಾಯ್ದೆರೆದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಅಂಗನವಾಡಿಯಲ್ಲೂ ನೀರಿನದ್ದೇ ಸಮಸ್ಯೆ:
ಗಾಯಿತ್ರಿದೇವಿ ಮತ್ತು ಚೌಡೇಶ್ವರಿ ದೇಗುಲಗಳ ರಸ್ತೆಯಲ್ಲಿರುವ ಅಂಗನವಾಡಿಯಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಂಗನವಾಡಿಗೆ 6-7 ಮಕ್ಕಳು ಬರುತ್ತಾರೆ. ಇವರಿಗೆ ನೀರು ತರಲು, ಪೌಷ್ಠಿಕ ಆಹಾರ ತಯಾರು ಮಾಡಲು 2ನೇ ಬೀದಿಯಿಂದ ನೀರು ತರಲಾಗುತ್ತಿದೆ. ಶೌಚಗೃಹಕ್ಕೆ ಬಳಕೆ ಮಾಡಲು ಬಿಂದಿಗೆ, ಬಕೆಟ್‌ಗಳಲ್ಲಿ ನೀರನ್ನು ತಂದು ಸಂಗ್ರಹ ಮಾಡಿಕೊಂಡು ಇಡಲಾಗಿದೆ.
ದೇವಾಂಗ ಬೀದಿಯ 1ನೇ ಕ್ರಾಸ್‌ನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಇರುವ ಬೋರ್‌ವೆಲ್ ಬಾವಿಗಳು ಹಾಳಾಗಿವೆ. ಇದರಿಂದಾಗಿ ತೊಂಬೆ ನಲ್ಲಿ ಬಳಕೆಗೆ ಬಾರದಂತಾಗಿದೆ. ಈ ಸಂಬಂಧ ನಾನು ನಗರಸಭೆ ಪೌರಾಯುಕ್ತರಿಗೆ ಮಾರ್ಚ್‌ನಲ್ಲಿ ಮನವಿ ಸಲ್ಲಿಸಿದ್ದೆ. ಇದರಿಂದ ಏನೂ ಪ್ರಯೋಜವಾಗಲಿಲ್ಲ. ನಮಗೆ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಒತ್ತಾಯಿಸುತ್ತೇನೆ.ವಿಜಯ್‌ಕುಮಾರ್ ಜಟ್ಟಪ್ಪ, ದೇವಾಂಗ ಬೀದಿ ನಿವಾಸಿ, ಚಾಮರಾಜನಗರ
ದೇವಾಂಗ ಬೀದಿಯಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಎರಡು ಬೋರ್‌ವೆಲ್ ಕೊರಿಸಿ ವಿಲವಾದವು. ಬೇರೆ ವಾರ್ಡ್‌ನ ವ್ಯಾಪ್ತಿಯಲ್ಲಿ ಬೋರ್‌ವೆಲ್ ಕೊರಿಸಿ ಅಲ್ಲಿಂದ ಇಲ್ಲಿಗೆ ಪೈಪ್‌ಲೈನ್ ಮೂಲಕ ನೀರು ಒದಗಿಸೋಣವೆಂದರೆ ಅಲ್ಲೂ ನೀರು ಸಿಗಲಿಲ್ಲ. ಈಗ ಬೇರೆ ಕಡೆ ಪಾಯಿಂಟ್ ಹುಡುಕಿ ಬೋರ್‌ವೆಲ್ ಕೊರೆಸಬೇಕೆಂದುಕೊಂಡಿದ್ದೇವೆ.ಮಂಜುನಾಥ್, ನಗರಸಭೆ ಸದಸ್ಯ, 11ನೇ ವಾರ್ಡ್, ಚಾಮರಾಜನಗರ
ದೇವಾಂಗ ಬೀದಿಯ 1ನೇ ಕ್ರಾಸ್‌ನಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುವುದು. ಬಳಿಕ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ.ರಾಮದಾಸ್, ಪೌರಾಯುಕ್ತ, ನಗರಸಭೆ, ಚಾಮರಾಜನಗರ