

ಚಾಮರಾಜನಗರ: ಮಣ್ಣಿನಲ್ಲಿ ಪೋಷಕಾಂಶ ಕಡಿಮೆಯಾದಾಗ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ಮಣ್ಣಿನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಪ್ರದೀಪ್ ಹೇಳಿದರು.
ತಾಲೂಕಿನ ಕಬ್ಬಳ್ಳಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ಸಹಯೋಗದಲ್ಲಿ ಅಂತಿಮ ವರ್ಷದ ಬಿಎಸ್ಸಿ(ಹಾನರ್ಸ್) ಅಗ್ರಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಬುಧವಾರ ಅವರು ಮಾತನಾಡಿದರು.
ಬೆಳೆಗಳ ಉತ್ತಮ ಇಳುವರಿಗಾಗಿ 14 ರೀತಿಯ ಪೋಷಕಾಂಶಗಳನ್ನು ನೀಡಬೇಕು. ಇದರಲ್ಲಿ ಯಾವುದಾದರೂ ಒಂದು ಕಮ್ಮಿಯಾದರೆ ಪೋಷಕಾಂಶದ ಕೊರತೆಯನ್ನು ಕಾಣಬಹುದು. ಇದಕ್ಕೆ ಪರಿಹಾರವಾಗಿ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಉಳಮೆ ಮಾಡುವ ಸಮಯದಲ್ಲಿ ಮಣ್ಣಿಗೆ ಕೊಟ್ಟಿಗೆ ಗೊಬ್ಬರ ಸೇರಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ವಿದ್ಯಾರ್ಥಿನಿ ಅನನ್ಯ ಬಾಳೆ ಹಾಗೂ ಅರಿಶಿಣದಲ್ಲಿ ಕಾಣುವ ಪೋಷಕಾಂಶದ ಕೊರತೆಯ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿನಿ ರಕ್ಷಿತಾ ಮುಸುಕಿನ ಜೋಳ ಹಾಗೂ ಸೂರ್ಯಕಾಂತಿಯಲ್ಲಿ ಕಾಣುವಂತಹ ಪೋಷಕಾಂಶದ ಕೊರತೆ ಬಗ್ಗೆ ವಿವರಿಸಿದರು. ಸಸ್ಯರೋಗ ಶಾಸ ಪ್ರಾಧ್ಯಾಪಕ ಡಾ.ಎನ್.ಉಮಾಶಂಕರ್, ಗ್ರಾಮದ ರೈತರು ಹಾಜರಿದ್ದರು.