

ಚಾಮರಾಜನಗರ: ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಡಳಿತ ಶ್ರೀಬಸವೇಶ್ವರ ಪುತ್ಥಳಿಯನ್ನು ಅಕ್ರಮವಾಗಿ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಯುವ ಘಟಕ ರಾಜ್ಯಾಧ್ಯಕ್ಷ ಸಿ.ಎಂ.ಕೃಷ್ಣ ಶನಿವಾರ ದೂರು ಸಲ್ಲಿಸಿದ್ದಾರೆ.
ನಗರದ ಪಟ್ಟಣ ಪೋಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಶ್ ಅವರಿಗೆ ದೂರು ಸಲ್ಲಿಸಿ ಮಾತನಾಡಿದ ಅವರು, ಸ್ವಜನ ಪಕ್ಷಪಾತ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡು ಜಿಲ್ಲಾಧಿಕಾರಿ ಶಿಲ್ಪನಾಗ್, ಅಪರ ಜಿಲ್ಲಾಧಿಕಾರಿ ಗೀತಾಹುಡೇದ ಹಾಗೂ ಇನ್ನಿತರೆ ಅಧಿಕಾರಿಗಳು ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳು ಮತ್ತು ಅಪರ ಜಿಲ್ಲಾಧಿಕಾರಿಗಳು ಮತ್ತು ಯೋಜನಾ ವ್ಯವಸ್ಥಾಪಕರು ತಮ್ಮ ಸಮುದಾಯದವರನ್ನು ಮೆಚ್ಚಿಸುವ ಸಲುವಾಗಿ ನಿಗದಿಯಾಗಿರುವ ಸ್ಥಳವನ್ನು ಬಿಟ್ಟು, ಅಂಬೇಡ್ಕರ್ ಪ್ರತಿಮೆ ಹತ್ತಿರ ನಿರ್ಮಾಣ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು. ಸುಪ್ರೀಂ ಕೋರ್ಟ್ ಆದೇಶ ಮತ್ತು ಸರ್ಕಾರಿ ಸುತ್ತೋಲೆಯನ್ನು ಗಾಳಿಗೆ ತೂರಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವಂತಹ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಹೊಂಗನೂರು ನಟರಾಜು ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ ಪ್ರಧಾನ ಕಾರ್ಯದರ್ಶಿ ಸೋಮುಸುಂದರ್, ಕದಂಬ ಅಂಬರೀಶ್, ವಕೀಲ ಸುಹಾಸ್, ಇಂದ್ರಜಿತ್, ಆರ್.ಅನಂತಕುಮಾರ್, ಲಿಂಗರಾಜ ಹಾಜರಿದ್ದರು.