ಅಂಗಡಿ ಬೀದಿಗೆ ಬಂದ ಎಡಿಸಿ

19raju8
Published on

ಚಾಮರಾಜನಗರ: ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದರೂ ಮಾರಾಟ ಮಾಡುತ್ತಿರುವ ಅಂಗಡಿಗಳ ಮಾಲೀಕರಿಗೆ ಬುಧವಾರ ಶಾಕ್ ಕಾದಿತ್ತು. ಅಧಿಕಾರಿಗಳ ತಂಡದೊಂದಿಗೆ ಖುದ್ದಾಗಿ ಫೀಲ್ಡ್‌ಗಿಳಿದಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ, ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ದೊಡ್ಡಂಗಡಿ ಹಾಗೂ ಚಿಕ್ಕಂಗಡಿ ಬೀದಿಗಳಲ್ಲಿರುವ ಅಂಗಡಿಗಳಿಗೆ ಎಡಿಸಿ ಗೀತಾ ಹುಡೇದಾ, ನಗರಸಭೆ ಪೌರಾಯುಕ್ತ ರಾಮದಾಸ್ ಮತ್ತು ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿತು. 7 ರಿಂದ 8 ಅಂಗಡಿಗಳಿಗೆ ಭೇಟಿ ನೀಡಿ, ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಗರಂ ಆದರು. 15 ಕೆ.ಜಿ ಪ್ಲಾಸ್ಟಿಕ್ ಕೈಚೀಲಗಳನ್ನು ವಶಪಡಿಸಿಕೊಂಡರು. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿದರೆ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅವಧಿ ಮೀರಿದ ಆಹಾರ ಮಾರಾಟ:
ನಗರದ ಚಿಕ್ಕಂಗಡಿ ಬೀದಿಯ ಅಂಗಡಿಯೊಂದರಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಎಡಿಸಿ ಗೀತಾ ಹುಡೇದಾ, ಅಂಗಡಿ ಮಾಲೀಕನ ವಿರುದ್ಧ ಕೆಂಡಾಮಂಡಲವಾದರು. ಅವಧಿ ಮುಗಿದಿದ್ದರೂ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವುದು ಅಪರಾಧ. ಕೂಡಲೇ ಪದಾರ್ಥಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು. ಇದೇ ವೇಳೆ ಅಂಗಡಿ ಮಾಲೀಕರ ವಿರುದ್ಧ ಗರಂ ಆದ ಪೌರಾಯುಕ್ತ ರಾಮದಾಸ್, ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ ಉತ್ಪಾದನೆ ಮತ್ತು ಅವಧಿ ಮುಗಿದ ದಿನಾಂಕವನ್ನು ನಮೂದು ಮಾಡಬೇಕೆಂದು ಸೂಚನೆ ನೀಡಿದರು.

ಅಂಗಡಿ ಬಂದ್: ನಗರಸಭೆ ವತಿಯಿಂದ ಲೈಸೆನ್ಸ್ ಪಡೆಯದೆ ತೆರೆದಿದ್ದ ಅಂಗಡಿಯನ್ನು ಬಂದ್ ಮಾಡಿಸಲಾಯಿತು. ಅನುಮತಿ ಇಲ್ಲದೆ ಹೇಗೆ ಅಂಗಡಿ ತೆರೆದಿದ್ದೀರಿ ಎಂದು ಅಂಗಡಿ ಮಾಲೀಕರನ್ನು ಪೌರಾಯುಕ್ತ ರಾಮದಾಸ್ ತರಾಟೆಗೆ ತೆಗೆದುಕೊಂಡರು. ಲೈಸೆನ್ಸ್ ಪಡೆದು ತೆರೆಯುವಂತೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net