ಬಿಜೆಪಿ ಬಾಯಿಗೆ ‘ಕೈ’ ತುತ್ತು

11rajesh2
Published on

ಚಾಮರಾಜನಗರ: ‘ಕೈಗೆ ಬರಬೇಕಿದ್ದ ತುತ್ತು ಬಿಜೆಪಿ ಬಾಯಿಗೆ ಬಿದ್ದಿದ್ದು ಹೇಗೆ’..?, ಇದು ಚಾಮರಾಜನಗರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಲಿತಾಂಶದ ಆಳ-ಅಗಲದ ಪ್ರಶ್ನೆ.

ಅಸಲಿ ಲೆಕ್ಕಾಚಾರದ ಪ್ರಕಾರ ನಗರಸಭೆಯಲ್ಲಿ 17 ಮತಗಳ ಬಲವನ್ನು ಹೊಂದಿದ್ದ ಕಾಂಗ್ರೆಸ್ ಚುನಾವಣೆಯಲ್ಲಿ ಮಕಾಡೆ ಮಲಗಿತು. 15 ಮತಗಳ ಶಕ್ತಿ ಹೊಂದಿದ್ದ ಬಿಜೆಪಿ ಗೆದ್ದು ಅಧ್ಯಕ್ಷರಾಗಿ ಸುರೇಶ್, ಉಪಾಧ್ಯಕ್ಷತೆಯಾಗಿ ಮಮತಾ ಚುಕ್ಕಾಣಿ ಹಿಡಿದಿರುವುದು ಗೊತ್ತಿರುವ ಸಂಗತಿ.
ನಗರಸಭೆ ಬಿಜೆಪಿ ಸದಸ್ಯ ಮಹದೇವಯ್ಯ ಅವರಿಂದ ಕಾಂಗ್ರೆಸ್ ಅಡ್ಡ ಮತದಾನ ಮಾಡಿಸುವಲ್ಲಿ ಯಶಸ್ವಿಯಾದರೆ, ಕಾಂಗ್ರೆಸ್ ಸದಸ್ಯರಾದ ಆರ್.ಪಿ.ನಂಜುಂಡಸ್ವಾಮಿ, ನೀಲಮ್ಮ, ಭಾಗ್ಯ ಗೈರಾಗಿ, ಮತ್ತೋರ್ವ ಸದಸ್ಯೆ ಚಂದ್ರಕಲಾ ಅವರಿಂದ ಅಡ್ಡಮತದಾನ ಮಾಡಿಸುವಲ್ಲಿ ಬಿಜೆಪಿ ಸಲವಾಗಿರುವುದೂ ತಿಳಿದಿರುವ ವಿಷಯ. ಆದರೆ ಇದೆಲ್ಲಾ ಸಾಧ್ಯವಾಗಿದ್ದು ಹೇಗೆ ಎನ್ನುವುದರೊಳಗೆ ಸೂಕ್ಷ್ಮ ರಾಜಕಾರಣದ ವಿಷಯ ಅಡಗಿದೆ.

ಕಳೆದ ನಾಲ್ಕು ವಿಧಾನಸಭೆ ಚುನಾವಣೆಗಳಿಂದ ಶಾಸಕ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಗೆಲ್ಲಲು ಬಿಜೆಪಿ ರೂಪಿಸುವ ಕಾರ್ಯತಂತ್ರಗಳು ಪ್ರಯೋಜನಕ್ಕೆ ಬರಲಿಲ್ಲ ಎನ್ನುವುದು ಎಷ್ಟು ಸತ್ಯವೋ ಹಾಗೆಯೇ, ಕಳೆದ ಮತ್ತು ಈ ಸಲದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ರೂಪಿಸಿದ ತಂತ್ರಗಳೂ ಲ ಕೊಟ್ಟಿಲ್ಲ ಎನ್ನುವುದೂ ಅಷ್ಟೇ ಸತ್ಯ.
ವಿಧಾನಸಭೆ ಚುನಾವಣೆಯಲ್ಲಿ ಎದುರಾಳಿಗಳಿಗಿಂತ ಮೊದಲೇ ತಂತ್ರಗಾರಿಕೆ ಮುಗಿಸಿ ಕುಳಿತು ಆಟ ನೋಡುವುದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಒಲಿದಿರುವ ಪ್ರತಿಭೆ. ಈ ಕಲೆಯನ್ನು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಕಲಿತು ಕರಗತಗೊಳಿಸಿಕೊಂಡು ಬಿಟ್ಟಿತ್ತು. ಒಗ್ಗಟ್ಟಿನಿಂದ ಚುನಾವಣೆಗೆ ಕೆಲಸ ಮಾಡಿತು. ನಾಲ್ವರು ನಾಯಕರು ಪ್ರಮುಖ ಪಾತ್ರವಹಿಸಿದರು. ಕಾಂಗ್ರೆಸ್ ಮೈ ಕೊಡವಿ ಮೇಲೇಳುವ ಮೊದಲೇ ಬಿಜೆಪಿ ಆಟ ಮುಗಿಸಿ ನೋಟ ಬೀರುತ್ತಾ ಕುಳಿತಿತ್ತು.

ಪ್ರತಿ ಚುನಾವಣೆಗಳೂ ಸ್ಪರ್ಧಿಗಳ ಪಾಲಿಗೆ ಯುದ್ಧವಿದ್ದಂತೆ. ಯುದ್ಧದ ಹಿಂದಿನ ದಿನ ಶಸಾಭ್ಯಾಸಕ್ಕೆ ಕರೆದಾಗ ಸೈನಿಕರು ಸಂಪರ್ಕಕ್ಕೆ ಸಿಗದೆ ಹೋದರೆ ‘ರಾಜ’ ಸೋಲಿನೊಂದಿಗೆ ಸಂಭಾಷಣೆ ನಡೆಸಬೇಕಾಗುತ್ತದೆ. ಇದೇ ರೀತಿ ಕಾಂಗ್ರೆಸ್ ಯುದ್ಧ ಕಾಲದಲ್ಲಿ ಶಸಾಭ್ಯಾಸ ಮಾಡಲು ಹೊರಟಿತು. ಹೀಗಾಗಿ ಸೋಲಿನತ್ತ ಮುಖ ಮಾಡಬೇಕಾಯಿತು ಎನ್ನುವ ಮಾತಿದೆ. ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ, ಒಮ್ಮತದ ತೀರ್ಮಾನವಿರಲಿಲ್ಲ ಎನ್ನುವ ಸುದ್ದಿ ಚರ್ಚೆಯಾಗುತ್ತಿದೆ. ಅಭ್ಯರ್ಥಿ ರಾಜಪ್ಪ ಅವರನ್ನು ಸೋಲಿಸಲು ಒಳೇಟು ಕೂಡ ಕಾರಣವಾಗಿತು. ಕೊಳ್ಳೇಗಾಲದಲ್ಲಿ ಎ.ಆರ್.ಕೃಷ್ಣಮೂರ್ತಿ, ಗುಂಡ್ಲುಪೇಟೆಯಲ್ಲಿ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಆಪ್ತನ ಅಪಜಯ ಜಿಲ್ಲಾಕೇಂದ್ರದಲ್ಲಿ ಕಾಂಗ್ರೆಸ್ ರಾಜಕೀಯವನ್ನು ಅಣಕ ಮಾಡಿತು.
ವರದಿ ಕೇಳಿದ ಕೆಪಿಸಿಸಿ ಉಪಾಧ್ಯಕ್ಷ:
ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್‌ನಿಂದ ವರದಿ ಕೇಳಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರೇಷ್ಮೆ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಸಂಸದ ಸುನೀಲ್‌ಬೋಸ್, ಎಂಎಸ್‌ಐಎಲ್ ಅಧ್ಯಕ್ಷರೂ ಆಗಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷರೂ ಆಗಿರುವ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್‌ಗೆ(ಮುನ್ನ) ಕೆಪಿಸಿಸಿ ಉಪಾಧ್ಯಕ್ಷ ಮತ್ತು ಜಿಲ್ಲಾ ಉಸ್ತುವಾರಿ ವಿ.ಆರ್.ಸುದರ್ಶನ್ ನೋಟೀಸ್ ನೀಡಿದ್ದಾರೆ. ಸೆ.9ರಂದು ನಡೆದ ಚಾಮರಾಜನಗರ ನಗರಸಭೆ ಚುನಾವಣೆಗೆ ಸಂಬಂಧಪಟ್ಟಂತೆ ನಡೆದಿರುವ ಪ್ರಸ್ತುತ ವಿದ್ಯುಮಾನಗಳ ಬಗ್ಗೆ 3 ದಿನಗಳ ಒಳಗೆ ಕೆಪಿಸಿಸಿಗೆ ವರದಿಯನ್ನು ಕಳುಹಿಸಿಕೊಡಬೇಕೆಂದು ಅಧ್ಯಕ್ಷರ ಆದೇಶದ ಮೇರೆಗೆ ಕೋರಲಾಗಿದೆ ಎಂದು ವಿ.ಆರ್.ಸುದರ್ಶನ್ ತಿಳಿಸಿದ್ದಾರೆ.

ಮತ ಕೊಟ್ಟ ಎಸ್‌ಡಿಪಿಐ
ಎಸ್‌ಡಿಪಿಐ ಪಕ್ಷದ 6 ಸದಸ್ಯರ ಕಾಂಗ್ರೆಸ್‌ಗೆ ಬೆಂಬಲ ನೀಡಿ ಮತ ಹಾಕಿದರು. ಆದರೆ ಈ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಅಬ್ರಾರ್ ಅಹಮದ್‌ಗೆ ಕಾಂಗ್ರೆಸ್ ಮತ ಕೊಡಿಸುವಲ್ಲಿ ಸೋತುಹೋಯಿತು.

ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಗೈರಾದ ಮೂವರು ಮತ್ತು ಅಡ್ಡ ಮತದಾನ ಮಾಡಿದ ಸದಸ್ಯರನ್ನು ಪಕ್ಷದಿಂಧ ಉಚ್ಛಾಟನೆ ಮಾಡಲು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಅವರ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಕಾನೂನು ಪ್ರಕಾರ ಹೋರಾಟ ನಡೆಸುತ್ತೇವೆ.ಪಿ.ಮರಿಸ್ವಾಮಿ, ಕಾಡಾ ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net