ವಿಜೃಂಭಣೆಯಿಂದ ನಡೆದ ಶ್ರೀಶಂಕರೇಶ್ವರ ಸ್ವಾಮಿ ಜಾತ್ರೆ

11rajesh5
Published on

ಚಾಮರಾಜನಗರ: ತಾಲೂಕಿನ ಯಡಿಯೂರು ಮಂಗಲ ಗ್ರಾಮದ ಬಳಿ ಇರುವ ಶ್ರೀಶಂಕರೇಶ್ವರಸ್ವಾಮಿ ಬೆಟ್ಟದಲ್ಲಿ ಬುಧವಾರ ವಿಜೃಂಭಣೆಯಿಂದ ಜಾತ್ರೆ ನಡೆಯಿತು.

ಜಾತ್ರೆ ಪ್ರಯುಕ್ತ ಮುಂಜಾನೆ ಗಣೇಶ ಮೂರ್ತಿಗೆ ಮೊದಲ ಪೂಜೆ ಸಲ್ಲಿಸಲಾಯಿತು. ಬಳಿಕ ಶ್ರೀಶಂಕರೇಶ್ವರಸ್ವಾಮಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ಬಿಲ್ವಪತ್ರೆ ಅಭಿಷೇಕ, ಮಹಾಮಂಗಳಾರತಿಯೊಂದಿಗೆ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು.

ಜಾತ್ರೆ ಅಂಗವಾಗಿ ಸ್ವಾಮಿಗೆ ವಿವಿಧ ಬಗ್ಗೆಯ ಹೂಗಳಿಂದ ಅಲಂಕಾರ ಮಹಾ ಮಂಗಳಾರತಿ ನಡೆಯಿತು. ಮಧ್ಯಾಹ್ನ ಯಡಿಯೂರು ಗ್ರಾಮದಿಂದ ನಂದಿ ಧ್ವಜಗೊಂದಿಗೆ ಶ್ರೀಶಂಕರೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಬೆಟ್ಟದ ತಬ್ಬಲಿನಲ್ಲಿ ಇರುವ ಶ್ರೀವೀರಭದ್ರೇಶ್ವರ ದೇವಾಲಯದ ಮುಂದಕ್ಕೆ ತರಲಾಯಿತು. ದೇಗುಲದ ಆವರಣದಲ್ಲಿ ಹೂವಿನಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಬಳಿಕ ಯಡಿಯೂರು ಗ್ರಾಮಕ್ಕೆ ಉತ್ಸವ ಮೂರ್ತಿಯನ್ನು ಕೊಂಡೊಯ್ದು ಸಂಜೆ ಮೆರವಣಿಗೆ ಮಾಡಲಾಯಿತು. ಮಂಗಲ ಗ್ರಾಮದಿಂದ ಮತ್ತೊಂದು ಶ್ರೀಶಂಕರೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಶ್ರೀಬೀರೇಶ್ವರ ದೇವರೊಂದಿಗೆ ಶಂಕರೇಶ್ವರ ಬೆಟ್ಟಕ್ಕೆ ತಂದು ದೇವರನ್ನು ತಲೆಯ ಮೇಲೆ ಹೊತ್ತು ಕುಣಿಯುವ ಮೂಲಕ ಪೂಜೆ ಸಲ್ಲಿಸಲಾಯಿತು.

ಬಳಿಕ ಗ್ರಾಮಕ್ಕೆ ತೆರಳಿ ಗಣೇಶ ಮೂರ್ತಿ, ಶ್ರೀಶಂಕರೇಶ್ವರ, ಶ್ರೀ ಬೀರೇಶ್ವರ ದೇವರುಗಳನ್ನು ಮಂಗಳವಾದ್ಯಗಳೂಂದಿಗೆ ಮೆರವಣಿಗೆ ನಡೆಸಲಾಯಿತು. ಬಳಿಕ ಗಣೇಶ ಮೂರ್ತಿಯನ್ನು ಊರಿನ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಶ್ರೀಶಂಕರೇಶ್ವರಸ್ವಾಮಿ ಜಾತ್ರೆಯನ್ನು ಮಂಗಲ, ಯಡಿಯೂರು, ಹುಲ್ಲೇಪುರ, ಮಹಂತಾಳಪುರ, ಕರಡಿಮೋಳೆ, ಮಂಗಲ ಹೊಸೂರು ಗ್ರಾಮಸ್ಥರು ಆಚರಣೆ ಮಾಡಿದರು. ಜಾತ್ರೆಗೆ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net