

ಚಾಮರಾಜನಗರ: ಸಂಜೀವಿನಿ ಗಿಡಗಳನ್ನು ನಾವು ಇಂದು ಪೋಷಿಸಿದರೆ ಅವು ನಾಳೆ ನಮ್ಮನ್ನು ಕಾಪಾಡುತ್ತವೆ. ಮುಂದಿನ ತಲೆಮಾರುಗಳಿಗೂ ಸಲ್ಲುತ್ತವೆ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ಹಾಗೂ ದೀನಬಂಧು ಸಂಸ್ಥೆಯ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಜೀವಿನಿ ವನ ರೂಪಿಸಲು ಔಷಧೀಯ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.
ದೀನಬಂಧು ಸಂಸ್ಥೆಯ ಪ್ರೊ. ಜಯದೇವ ಅವರು ತರಿಸಿರುವ ಈ ಗಿಡಗಳು ಅತ್ಯಮೂಲ್ಯ ಗಿಡಗಳಾಗಿವೆ. ವಿಶಿಷ್ಟ ಬಗೆಯ ಔಷಧಿ ಗುಣಗಳನ್ನು ಹೊಂದಿವೆ. ಇವು ಅಪರೂಪದ ಸಂಜೀವಿನಿ ಗಿಡಗಳು ಎಂದರು. ಇವುಗಳನ್ನು ಶ್ರದ್ದೆಯಿಂದ ಕಾಪಾಡಿಕೊಳ್ಳುವುದು ಅಗತ್ಯ. 40ಕ್ಕೂ ಹೆಚ್ಚು ಬಗೆಯ ವಿವಿಧ ತಳಿಗಳ ತಲಾ ಮೂರು ಸಸಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅತ್ಯಂತ ಕಳಕಳಿಯಿಂದ ನೀರೆರೆದು ಪೋಷಿಸಬೇಕು. ಅಲ್ಲದೆ ಒಂದೊಂದು ಗಿಡಗಳನ್ನು ದತ್ತು ತೆಗೆದುಕೊಂಡು ಬೆಳಸಬೇಕು ಎಂದರು.
ಔಷಧಿ ಗಿಡಗಳಿಗೆ ಕಾಲಕಾಲಕ್ಕೆ ಗೊಬ್ಬರ ಹಾಗೂ ಕಳೆ ತೆಗೆದು ಹಾನಿಯಾಗದಂತೆ ಬೆಳೆಸಬೇಕು. ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಯವರು ಸಹ ಕೈ ಜೋಡಿಸಲಿದ್ದು, ಔಷಧ ಗುಣದ ಮಾಹಿತಿಯೊಳಗೊಂಡ ನಾಮಫಲಕಗಳನ್ನು ಇಲಾಖೆ ನೀಡಲಿದೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಪ್ರೊ.ಎಸ್ ಚಂದ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕರಾದ ಎ.ಎಂ. ಶಿವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಸಿ.ಎಫ್ ಸಭ್ಯಶ್ರೀ, ಬಿ.ಎಸ್ ಶ್ರೀಪಾದ, ಡಾ .ಎಂ.ಎಸ್.ಮಂಜುನಾಥ್, ಡಾ. ನೀಲಕಂಠಸ್ವಾಮಿ, ಡಾ. ಚಿನ್ಮಯ್ ಭಟ್ ಡಾ. ಗುರುಪ್ರಸಾದ್, ಪ್ರೊ. ಮಹದೇವಸ್ವಾಮಿ, ಗಣೇಶ್ ಪ್ರಸಾದ್ ಇದ್ದರು.