ಗುಂಡ್ಲುಪೇಟೆ: ಶಿಕ್ಷಕ ವೃತ್ತಿ ಗೌರವಯುತವಾಗಿದ್ದು, ಸಮಾಜದ ಅಭಿವೃದ್ಧಿ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು ಎಂದು ಪಡುಗೂರು ಅಡವಿ ಮಠಾಧ್ಯಕ್ಷ ಶ್ರೀ ಶಿವಲಿಂಗೆಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀಮದ್ದಾನೇಶ್ವರ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅನಾದಿ ಕಾಲದಿಂದಲೂ ಶಿಕ್ಷಕರನ್ನು ಗುರುವಿನ ಸ್ಥಾನದಲ್ಲಿ ನೋಡಲಾಗುತ್ತಿದೆ. ಮುಗ್ಧ ಮಗುವಿನ ಮನಸ್ಸು ಅರ್ಥ ಮಾಡಿಕೊಂಡು ಆತನಿಗೆ ಶಿಕ್ಷಣ ನೀಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಉತ್ತಮ ಸಂಸ್ಕಾರಯುತ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ, ದೇಶದ ಅಭ್ಯುದಯಕ್ಕೆ ಅಡಿಪಾಯ ಹಾಕುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ತಂತ್ರಜ್ಞಾನದ ಮೂಲಕ ಕಲಿಕೆ ಮಾಡಲು ಪ್ರಯತ್ನಿಸಲಾಯಿತು. ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದಂತೆ ಆಗುವುದಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಉನ್ನತ ಸ್ಥಾನ ನೀಡಲಾಗಿದ್ದು, ಶಿಕ್ಷಣ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ ಎಂದರು
ತಾಲೂಕಿನ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಹಾಗೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಾದ ಗುರುಲಿಂಗಪ್ಪ, ಲೀಲಾವತಿ, ನಂಜಪ್ಪ, ಶಿವವೀರಭದ್ರಪ್ಪ, ಆನಂದಮೂರ್ತಿ, ನವೀನ್ ಕುಮಾರ್ ಅವರಿಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದ ಶಾಲೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ರವಿ ಕಮ್ಮರಹಳ್ಳಿ, ನಿವೃತ್ತ ಉಪನ್ಯಾಸಕರಾದ ಬಸವರಾಜು, ಪ್ರಾಂಶುಪಾಲ ನಟರಾಜು, ಮುಖ್ಯ ಶಿಕ್ಷಕ ಪ್ರಕಾಶ್, ಸೋಮಶೇಖರ್, ಸಹ ಶಿಕ್ಷಕರಾದ ಮಹೇಶಪ್ಪ, ಮೋಹನ್, ಅನಿಲ್ ಕುಮಾರ್, ರಾಜೇಶ್, ಶಿವಪ್ರಕಾಶ್, ಪ್ರಭುಸ್ವಾಮಿ, ಮಲ್ಲೇಶ್, ನಾಗಪ್ಪ, ಸ್ವಾಮಿ, ಗೋವಿಂದರಾಜು, ಮದುಕಿರಣ್, ಸೌಮ್ಯ, ನಾಗವೇಣಿ, ದಿವ್ಯಾರಾಣಿ, ಮಹಾಲಕ್ಷ್ಮೀ, ನಂದೀಶ್, ಮಂಜುಳಾ, ಪೂರ್ಣಿಮಾ ಮುಂತಾದವರು ಇದ್ದರು.