

ಹನೂರು: ಜನರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದರ ಜತೆಗೆ ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಬೂದು ನೀರು ನಿರ್ವಹಣೆ ಉತ್ತಮ ಯೋಜನೆಯಾಗಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲೂಕಿನ ಹೂಗ್ಯಂ, ರಾಮಾಪುರ ಹಾಗೂ ಕೌದಳ್ಳಿ ಗ್ರಾಮದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಬೂದು ನೀರು ನಿರ್ವಹಣೆ ನಿರ್ಮಾಣ ಕಾಮಗಾರಿಗೆ ಗುರುವಾರ ಶಾಸಕ ಎಂ.ಆರ್. ಮಂಜುನಾಥ್ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯ ಕೆಲವು ಗ್ರಾಮದಲ್ಲಿ ಚರಂಡಿ ಇಲ್ಲದ ಪರಿಣಾಮ ಕೊಳಚೆ ನೀರಿನಿಂದ ಅನೈರ್ಮಲ್ಯ ನಿರ್ಮಾಣವಾಗಿದೆ. ಚರಂಡಿಯಲ್ಲಿ ನೀರು ನಿಲ್ಲುವುದರಿಂದ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ದೆಸೆಯಲ್ಲಿ ಚರಂಡಿ ನೀರನ್ನು ಬೇರೆಡೆ ಸಂಗ್ರಹಿಸಿ ಸಂಸ್ಕರಣೆಯಾದ ಬಳಿಕ ಕಾಲುವೆಗೆ ಬಿಡಲಾಗುತ್ತದೆ. ಇದರಿಂದ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಬೂದು ನೀರು ನಿರ್ವಹಣೆ ಕಾಮಗಾರಿ ಸಹಕಾರಿಯಾಗಿದೆ. ಈಗಾಗಲೇ ಕ್ಷೇತ್ರ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದೀಗ ಹೂಗ್ಯಂ ಭಾಗದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಈ ಯೋಜನೆಯು ವೈಜ್ಞಾನಿಕವಾಗಿದ್ದು, ಮುಂದಿನ ಪೀಳಿಗೆಗೂ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಶೌಚಗೃಹ, ಬೀದಿ ದೀಪ ನಿರ್ವಹಣೆ ಹಾಗೂ ಚರಂಡಿ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಅಲ್ಲದೇ ಗ್ರಾಮಗಳಲ್ಲಿ ಮೂಲಸೌಕರ್ಯ ಕೊರತೆ ಸಂಬಂಧ ಆಯಾ ಗ್ರಾಪಂ ಪಿಡಿಒಗಳು ಆಡಳಿತ ಮಂಡಳಿ ಸಭೆ ಕರೆದು ಮೂಲ ಸೌಕರ್ಯ ಒದಗಿಸಬಹುದಾಗಿದೆ. ಹಾಗಾಗಿ ಗ್ರಾಮದ ಅಭಿವೃದ್ಧಿಗೆ ಈ ಯೋಜನೆ ಪೂರಕವಾಗಿದೆ ಎಂದು ತಿಳಿಸಿದರು.
ಬಳಿಕ ಕೌದಳ್ಳಿ ಗ್ರಾಮದ ಕೆಲವು ಬಡಾವಣೆಗೆ ತೆರಳಿದ್ದ ವೇಳೆ ಶಾಸಕರಿಗೆ ಚರಂಡಿ ಇಲ್ಲದಿರುವುದು ಗಮನಕ್ಕೆ ಬಂತು. ಈ ಬಗ್ಗೆ ಅಗತ್ಯ ಕ್ರಮವಹಿಸಿ ಚರಂಡಿ ನಿರ್ಮಿಸುವುದರ ಜತೆಗೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಾಪಂ ಇಒ ಉಮೇಶ್ ಅವರಿಗೆ ಸೂಚಿಸಿದರು.
ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಗ್ರಾಪಂ ಅಧ್ಯಕ್ಷರಾದ ಮುರುಗೇಶ್ವರಿ, ರವಿ, ಉಪಾಧ್ಯಕ್ಷೆ ರಾಜಮ್ಮ, ಸದಸ್ಯರಾದ ಚಿಕ್ಕಯ್ಯ, ವೀರೇಶ್, ಪಳನಿಸ್ವಾಮಿ, ರಾಜಣ್ಣ, ರವಿಕುಮಾರ್, ತಾಪಂ ಸಹಾಯಕ ನಿರ್ದೇಶಕ ರವೀಂದ್ರ, ಮುಖಂಡರಾದ ಮಂಜೇಶ್, ಹುಚ್ಚಯ್ಯ, ಮಾಣಿಕ್ಯ, ಮುನಿಯಪ್ಪ, ಅರುಳ್‌ಸ್ವಾಮಿ, ಮಹದೇವ, ಅಥಿಕ್, ಬಾಬು ಹಾಗೂ ಇನ್ನಿತರರು ಇದ್ದರು.