ಗುಂಡ್ಲುಪೇಟೆ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

04-GPT-1
Published on

ಗುಂಡ್ಲುಪೇಟೆ: ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಕಿರಣ್‌ಗೌಡ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷೆಯಾಗಿ ಹೀನಾ ಕೌಸರ್ 6 ಮತಗಳ ಅಂತರದಿಂದ ಜಯಗಳಿಸಿದರು.

ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಿರಣ್ ಗೌಡ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಹೀನಾ ಕೌಸರ್ 14 ಮತ ಪಡೆದರೆ ಬಿಜೆಪಿಯ ಕುಮಾರ್ 8 ಮತ ಗಳಿಸಿದರು. ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಟಿ.ರಮೇಶ್‌ಬಾಬು ಆಯ್ಕೆಯನ್ನು ಪ್ರಕಟಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಇಬ್ಬರೂ ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದವರಾಗಿದ್ದಾರೆ.

ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಂಗಳವಾರ ರಾತ್ರಿ ಮೈಸೂರಿನ ಖಾಸಗಿ ರೆಸಾರ್ಟ್‌ನಲ್ಲಿ ಬಿಜೆಪಿ ಸದಸ್ಯರಾದ ಕಿರಣ್‌ಗೌಡ, ಎನ್.ರಮೇಶ್, ಹೀನಾ ಕೌಸರ್, ಲಕ್ಷ್ಮೀದೇವಿ ಬಸವರಾಜು, ವೀಣಾ ಮಂಜುನಾಥ್ ಹಾಗೂ ಪಕ್ಷೇತರ ಅಭ್ಯರ್ಥಿ ಶಶಿಧರ್ ಅವರನ್ನು ತಮ್ಮ ಬಣಕ್ಕೆ ಬರಮಾಡಿಕೊಂಡು ಬುಧವಾರ ಮಿನಿ ಬಸ್ ಮೂಲಕ ಪುರಸಭೆಗೆ ನೇರವಾಗಿ ಕರೆತಂದರು.
ಪುರಸಭೆಯಲ್ಲಿ ಬಿಜೆಪಿ 13, ಕಾಂಗ್ರೆಸ್ 8, 1 ಎಸ್‌ಡಿಪಿಐ ಮತ್ತು 1 ಪಕ್ಷೇತರ ಸದಸ್ಯರು ಇದ್ದಾರೆ. ಆದರೆ ಬಿಜೆಪಿಯ ಐವರು ಸದಸ್ಯರನ್ನು ಕಾಂಗ್ರೆಸ್ ತನ್ನತ್ತ ಎಳೆದುಕೊಂಡಿದೆ. ಜತೆಗೆ ಒಬ್ಬರು ಪಕ್ಷೇತರ ಸದಸ್ಯ, ಶಾಸಕ ಗಣೇಶ್ ಪ್ರಸಾದ್ ಮತ್ತು ಸಂಸದ ಸುನೀಲ್ ಬೋಸ್ ಮತ ಸೇರಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ಕಾಂಗ್ರೆಸ್ 14 ಗಳಿಸಿದರೆ ಬಿಜೆಪಿ 8 ಮತ ಪಡೆಯಿತು.
ಗೈರಾದ ಬಿಜೆಪಿ ಸದಸ್ಯರು: ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿದ್ದ ಎನ್.ರಮೇಶ್, ರಾಣಿಲಕ್ಷ್ಮಿ ದೇವಿ ಹಾಗೂ ವೀಣಾ ಮಂಜುನಾಥ್ ಮತದಾನಕ್ಕೆ ಗೈರಾಗಿದ್ದರು.

ತಮ್ಮ ಪಕ್ಷದ ಐವರು ಸದಸ್ಯರು ಕಾಂಗ್ರೆಸ್ ಸೇರಿದ್ದಾರೆಂಬ ಹಿನ್ನೆಲೆಯಲ್ಲಿ ಬಿಜೆಪಿ ಮಂಗಳವಾರ ಪ್ರತಿಭಟನೆ ನಡೆಸಿ ಪಕ್ಷಾಂತರಿಗಳು ಮತದಾನಕ್ಕೆ ಹಾಜರಾಗದಂತೆ ಮಾಡುವ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಪುರಸಭೆ ಸುತ್ತಲೂ 144 ಸೆಕ್ಷನ್ ಜಾರಿಗೊಳಿಸಿದ್ದರು. ಡಿವೈಎಸ್‌ಪಿ ಸೇರಿದಂತೆ ನಾಲ್ವರು ಸರ್ಕಲ್ ಇನ್‌ಸ್ಪೆಕ್ಟರ್, 6 ಸಬ್‌ಇನ್‌ಸ್ಪೆಕ್ಟರ್ ಹಾಗೂ 100ಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ನಿಷೇಧಾಜ್ಞೆ ಹಿಂಪಡೆದ ತಹಸೀಲ್ದಾರ್
ಕ್ಲಿಷ್ಟಕರ ಸಂದರ್ಭದಲ್ಲಿ ಮಾತ್ರ ನಿಶೇಧಾಜ್ಞೆ ಜಾರಿಗೊಳಿಸಬೇಕೆಂದು ಪೊಲೀಸರು ಮನವರಿಕೆ ಮಾಡಿದ ನಂತರ ರಾತ್ರಿ 10 ಗಂಟೆ ವೇಳೆಗೆ ತಹಸೀಲ್ದಾರ್ ಟಿ.ರಮೇಶಬಾಬು ನಿಷೇಧಾಜ್ಞೆ ಹಿಂದೆಗೆದುಕೊಂಡರು. ಆದರೂ ಪಟ್ಟಣ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ಬಿಗಿ ಭದ್ರತೆ ನಿಯೋಜಿಸುವ ಮೂಲಕ ಮುನ್ನೆಚ್ಚರಿಕೆ ಕೈಗೊಂಡಿದ್ದರು.

ನ್ಯಾಯಾಲಯದ ಮೊರೆ ಹೋಗಲಿರುವ ಬಿಜೆಪಿ
ವಿಪ್ ಉಲ್ಲಂಘಿಸಿ ಕಾಂಗ್ರೆಸ್‌ಗೆ ಮತ ನೀಡಿದ ಹಾಗೂ ಮತದಾನದಿಂದ ದೂರವುಳಿದ ಐವರು ಸದಸ್ಯರ ವಿರುದ್ಧ ಬಿಜೆಪಿ ಶಿಸ್ತು ಹಾಗೂ ಕಾನೂನು ಕ್ರಮಕ್ಕೆ ಮುಂದಾಗಿದೆ. ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಐವರು ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಲು ತೀರ್ಮಾನಿಸಲಾಯಿತು. ಪುರಸಭೆಯಲ್ಲಿ ಚುನಾವಣಾ ನಡವಳಿಕೆಗಳನ್ನು ಸಂಗ್ರಹಿಸಲಾಗಿದ್ದು ಇವರ ಸದಸ್ಯತ್ವ ರದ್ದಿಗೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಮಾಜಿ ಅಧ್ಯಕ್ಷ ಪಿ.ಗಿರೀಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net