

ಚಾಮರಾಜನಗರ: ವಿದ್ಯಾರ್ಥಿ ಜೀವನದಲ್ಲಿ ಕೆಲವು ಕಾನೂನು ಅಂಶಗಳು ಬಹುಮುಖ್ಯವಾಗಿ ಬೇಕಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಕಾನೂನು ಅರಿವು ಪಡೆದುಕೊಳ್ಳಬೇಕು ಎಂದು ವಕೀಲ ಆರ್.ವಿರೂಪಾಕ್ಷ ಹೇಳಿದರು.
ನಗರದ ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಒಂದು ದಿನದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾನೂನಿನ ಪರಿಮಿತಿ ಒಳಗೆ ಕೇವಲ ಪೊಲೀಸ್, ವಕೀಲರು ಹಾಗೂ ಕೋರ್ಟ್ ಮಾತ್ರ ಬರುವುದಿಲ್ಲ. ಎಲ್ಲರೂ ಭಾಗಿದಾರರಾಗಿದ್ದೇವೆ. ಹಿರಿಯರನ್ನು ಕೇಳಿಕೊಂಡು ಹೋಗಬೇಕು, ಅವರನ್ನು ಕೇಳಿ ಯಾವುದಾದರೂ ಕೆಲಸ ಮಾಡಬೇಕು ಎಂಬ ಭಾವನೆ ಇದೆಯಲ್ಲ ಅದೇ ಕಾನೂನು, ಅದನ್ನು ನಿಮಗೆ ನೀವೆ ಮಾಡಿಕೊಂಡಿದ್ದೀರಿ, ಅದನ್ನು ನೀವೆ ಪಾಲಿಸಬೇಕು. ಕಾನೂನಿನ ಹೊರತು ಯಾರು ಇರಲು ಸಾಧ್ಯವಿಲ್ಲ ಎಂದರು.
ಪ್ರಕೃತಿಯಲ್ಲಿ ಕೆಲವು ಕಾನೂನು ಇದ್ದು, ಅದನ್ನು ಯಾರು ಮೀರಲು ಸಾಧ್ಯವಿಲ್ಲ. ಮಾನವ ನಿರ್ಮಿತ ಕಾನೂನುಗಳನ್ನು ಮೀರಬಹುದಾಗಿದ್ದು, ಇದನ್ನು ತಿಳಿದುಕೊಳ್ಳುವುದು ಎಲ್ಲರಿಗೂ ಅನಿವಾರ್ಯವಾಗಿದೆ. ಪ್ರಾಥಮಿಕವಾಗಿ ಕ್ರಿಮಿನಲ್ ಹಾಗೂ ಸಿವಿಲ್ ಎಂದು ಎರಡು ರೀತಿಯಲ್ಲಿ ನಮ್ಮ ಕಾನೂನುಗಳನ್ನು ವಿಭಾಗಿಸುತ್ತೇವೆ. ನಮ್ಮ ಕಾನೂನಿನಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾದ ಸ್ಥಾನವನ್ನು ನೀಡಿದೆ. ಕಾನೂನಿನ ಅರಿವು ಇದ್ದಾಗ ಉತ್ತಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಸಮಾಜದ ಆಗು-ಹೋಗುಗಳನ್ನು ಅರ್ಥೈಸಿಕೊಳ್ಳಬೇಕಾದರೆ ಕಾನೂನಿನ ಅರಿವು ಎಲ್ಲರಿಗೂ ಅತ್ಯಗತ್ಯ ಎಂದು ತಿಳಿಸಿದರು.
ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜ್ ಮೂರ್ತಿ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಎಚ್.ಎಸ್.ವೀರೇಶ್, ವೈ.ಎ.ರಮ್ಯಾ, ಬಿ.ಕೃತಿ, ತಸ್ಲೀಮ್ ಇತರರು ಉಪಸ್ಥಿತರಿದ್ದರು.