ಪರಿಸರ ಉಳಿವು ಪ್ರತಿಯೊಬ್ಬರ ಕರ್ತವ್ಯ

03-GPT-2
Published on

ಗುಂಡ್ಲುಪೇಟೆ: ಅರಣ್ಯ ನಾಶದಿಂದ ಪರಿಸರ ನಾಶದ ಜತೆಗೆ ವನ್ಯಜೀವಿಗಳು ಪಟ್ಟಣಗಳತ್ತ ಆಗಮಿಸುವ ಆತಂಕಕಾರಿ ಬೆಳವಣಿಗೆ ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಭಿಪ್ರಾಯಪಟ್ಟರು.

ತಾಲೂಕಿನ ಮೂಡಗೂರು ಗ್ರಾಮದ ವಿರಕ್ತ ಮಠದಿಂದ ಮಂಗಳವಾರ ಮರ ಬೆಳಸಿ ಧರೆ ಉಳಿಸಿ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಅರಣ್ಯದಿಂದ ವನ್ಯಜೀವಿಗಳು ಮೈಸೂರು ಬೆಂಗಳೂರಿನಂಥ ದೊಡ್ಡ ನಗರಗಳಲ್ಲಿಯೇ ಕಾಣಿಸಿಕೊಳ್ಳುತ್ತಿವೆ. ಅರಣ್ಯದಿಂದ ಕಾಡಂಚಿನ ಗ್ರಾಮಗಳಲ್ಲಿ ಮಾನವ- ವನ್ಯಜೀವಿಗಳ ಸಂಘರ್ಷ ಹೆಚ್ಚಾಗುತ್ತಿದೆ. ಎಲ್ಲ ಊರುಗಳಲ್ಲಿಯೂ ಚಿರತೆ, ಹುಲಿಗಳು ದಾಳಿ ನಡೆಸುತ್ತಿದ್ದು, ಸಾಕುಪ್ರಾಣಿಗಳನ್ನು ಕೊಲ್ಲುತ್ತಿವೆ. ಜಾಗತಿಕ ತಾಪಮಾನದ ಹೆಚ್ಚಳದಿಂದ ಕಳೆದ ವರ್ಷ ಕಂಡು ಕೇಳರಿಯದಷ್ಟು ಬಿಸಿಲಿನಿಂದ ಭೂಮಿಯ ತಾಪಮಾನ ಹೆಚ್ಚಾಗಿದೆ. ಇತ್ತೀಚೆಗೆ ಬೆಟ್ಟಗುಡ್ಡಗಳು ಕುಸಿಯುತ್ತಿರುವ ಘಟನೆಗಳು ಹೆಚ್ಚಾಗಿ ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮೂಡಗೂರು ಮಠದ ವತಿಯಿಂದ ಪ್ರತಿ ಗ್ರಾಮದಲ್ಲಿ ಮರ ಬೆಳೆಸಿ ಧರೆ ಉಳಿಸಿ ಅಭಿಯಾನ ಕೈಗೊಂಡು ಸಸಿಗಳನ್ನು ನೆಟ್ಟು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದನ್ನು ಸರ್ಕಾರದ ವತಿಯಿಂದ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪಡಗೂರು ಅಡವಿ ಮಠಾಧ್ಯಕ್ಷ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ, ಮೂಡಗೂರು ಮಠದ ಇಮ್ಮಡಿ ಉದ್ದಾನೇಶ್ವರ ಸ್ವಾಮೀಜಿ ಪರಿಸರ ಸಂರಕ್ಷಣೆಯ ಅಗತ್ಯದ ಬಗ್ಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಲಕ್ಕೂರು ನಟರಾಜು, ಪಡಗೂರು ರಾಜಪ್ಪ, ಲೀಲಾ ವೆಂಕಟೇಶ್, ವಿಶ್ವನಾಥ್, ಪ್ರಮೀತ್ ಕುಮಾರ್ ಮುಂತಾದ ಪರಿಸರಪ್ರೇಮಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಬ್ಬಳ್ಳಿ ಜಂಗಮ ಮಠದ ಶ್ರೀ ಗುರುಸಿದ್ದ ಸ್ವಾಮೀಜಿ, ಮೈಸೂರಿನ ಹಸಿರು ಮನೆಯ ಮುಖ್ಯಸ್ಥ ಎಚ್.ವಿ.ರಾಜೀವ್, ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net