ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

Application
Published on

ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ 2024-25ನೇ ಸಾಲಿನಲ್ಲಿ ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷ ವಯಸ್ಸಿನೊಳಗಿನ ಬಾಲಕ ಮತ್ತು ಬಾಲಕಿಯರಿಗೆ ನೀಡಲಾಗುವ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ 10 ಸಾವಿರ ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸುವವರು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ರಕ್ಷಣೆಗಾಗಿ ಧೈರ್ಯ, ಶೌರ್ಯವನ್ನು ಪ್ರದರ್ಶಿಸಿರಬೇಕು. ಅಸಾಧಾರಣ ಧೈರ್ಯ-ಶೌರ್ಯ ಪ್ರಕರಣವು ಆಗಸ್ಟ್-2023 ರಿಂದ ಜುಲೈ-2024ರ ಒಳಗೆ ನಡೆದಿರಬೇಕು. ಸಾಧನೆಯನ್ನು ಜಿಲ್ಲಾಮಟ್ಟದಲ್ಲಿ ಗುರುತಿಸಿರಬೇಕು. ಧೈರ್ಯ, ಶೌರ್ಯವನ್ನು ಪ್ರದರ್ಶಿಸಿದ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರಬೇಕು.

ಶೌರ್ಯ ಸಾಧನೆ ತೋರಿದ ಬಗ್ಗೆ ಆರಕ್ಷಕ ಇಲಾಖೆಯ ಪ್ರಾಥಮಿಕ ತನಿಖಾ ವರದಿ (ಎಫ್.ಐ.ಆರ್), ಜನ್ಮ ದಿನಾಂಕದ ಬಗ್ಗೆ ನಗರಸಭೆ, ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ, ಶಾಲೆಯಿಂದ ಪಡೆದ ವರ್ಗಾವಣೆ ಪತ್ರ ಮಗುವಿನ ಭಾವಚಿತ್ರ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿಬೇಕು. ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟಿರುವ ಜಿಲ್ಲಾಮಟ್ಟದ ಸಮಿತಿಯು ಶೌರ್ಯ ಸಾಹಸ ಸಾಧನೆಗೈದ ಮಕ್ಕಳನ್ನು ಆಯ್ಕೆ ಮಾಡಲಿದೆ.

ಆಸಕ್ತರು ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದ ಮೊದಲನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 129 ರಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಡೆದು ಕನ್ನಡ ಭಾಷೆಯಲ್ಲಿ ದ್ವಿಪ್ರತಿಗಳಲ್ಲಿ ಭರ್ತಿ ಮಾಡಿ ಸೆಪ್ಟೆಂಬರ್ 20ರೊಳಗೆ ಸಲ್ಲಿಸಬೇಕು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net