ರೈತರ ಬೇಡಿಕೆ ಈಡೇರಿಸಿದ್ದರೆ ಧರಣಿ

31rajesh2
Published on

ಚಾಮರಾಜನಗರ: ರೈತರ ವಿವಿಧ ಬೇಡಿಕೆಗಳನ್ನು ಹತ್ತು ದಿನಗಳೊಳಗೆ ಈಡೇರಿಸದಿದ್ದರೆ ನಗರದ ಜಿಲ್ಲಾಡಳಿತ ಭವನದ ಮುಂದೆ ನಿರಂತರ ಅಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ ಎಚ್ಚರಿಕೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಶನಿವಾರ ಆಯೋಜಿಸಿದ್ದ ರೈತರ ಕುಂದುಕೊರತೆಗಳ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಪ್ರಸಕ್ತ ಸಾಲಿಗೆ ಮುಂಗಡ 4000 ರೂ. ನಿಗದಿ ಮಾಡಿ ಕಳೆದ ಸಾಲಿನ ಲಾಭಾಂಶದಲ್ಲಿ ಸರ್ಕಾರದ ಆದೇಶದಂತೆ ಪ್ರತಿ ಟನ್‌ಗೆ 150 ರೂ. ಹಾಗೂ ಸಕ್ಕರೆ ಕಾರ್ಖಾನೆಯ ಮುಂದೆ ಎಪಿಎಂಸಿ ಮುಖಾಂತರ ಮುಖ್ಯದ್ವಾರದಲ್ಲಿ ತೂಕದ ಯಂತ್ರ ಅಳವಡಿಸುವ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು.

ಅಂತರ ಜಿಲ್ಲಾ ಕಬ್ಬು ಸಾಗಣೆ ನಿರ್ಬಂಧ ಹೇರಬಾರದು. ಮುಕ್ತ ಮಾರುಕಟ್ಟೆಯಲ್ಲಿ ರೈತ ಮಾರಾಟ ಮಾಡಿದರೆ ಹೆಚ್ಚಿನ ಬೆಲೆ ದೊರೆಯುತ್ತದೆ. ಕಟಾವು ವಿಳಂಬ ತಪ್ಪುತ್ತದೆ. ಅಲ್ಲದೆ ರೈತರಿಗೆ ಪೈಪೋಟಿಯ ದರ ಸಿಗುತ್ತದೆ. ಸಮಯಕ್ಕೆ ಸರಿಯಾಗಿ ಕಟಾವಾಗಲಿದೆ. ಕೇಂದ್ರ ಸರ್ಕಾರ ಎ್ಆರ್‌ಪಿ ದರವನ್ನು ಇಳುವರಿ ಪ್ರತಿ ಟನ್‌ಕಬ್ಬಿಗೆ 10.5ಕ್ಕೆ ಏರಿಕೆ ಮಾಡಿ 3,400 ರೂ. ನಿಗದಿ ಮಾಡಿರುವುದು ರೈತರಿಗೆ ಮಾಡಿದ ದ್ರೋಹವಾಗಿದೆ. ತಕ್ಷಣ ಇದನ್ನು ಮರುಪರಿಶೀಲನೆ ಮಾಡಿ 8.5ಕ್ಕೆ ಇಳುವರಿ ನಿಗದಿ ಮಾಡಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆಯ ಲಾಭಾಂಶ ಮತ್ತು ಖರ್ಚಿನ ಬ್ಯಾಲೆನ್ಸ್‌ಶೀಟನ್ನು ತನಿಖೆ ಮಾಡಿ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ-ಸಕ್ರಮ ಯೋಜನೆ ಮರುಜಾರಿ ಮಾಡಬೇಕು. ರೈತರು ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ಪಡೆಯಬೇಕಾದರೆ ಎರಡು ಮೂರು ಲಕ್ಷ ರೂ. ಖರ್ಚಾಗುತ್ತದೆ. ತಕ್ಷಣ ಈ ನಿಯಮವನ್ನು ಕೈ ಬಿಟ್ಟು ರೈತರ ಕೃಷಿಗೆ ವಿದ್ಯುತ್ ನೀಡಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರ ಜತೆಯಲ್ಲಿ ಸಭೆ ನಡೆಸಬೇಕು. ಸ್ಥಳೀಯ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ರೈತರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲೆಯೂರು ಮಹೇಂದ್ರ, ಉಪಾಧ್ಯಕ್ಷ ಪ್ರವೀಣ್, ಉಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜು, ಪ್ರಭು, ಸತೀಶ್, ಮೋಹನ್, ಚಂದ್ರ, ಮಹದೇವಪ್ಪ, ಮಂಜುನಾಥ್, ನಾಗಣ್ಣ, ಚಂದ್ರ, ಮಹದೇವಸ್ವಾಮಿ, ಗುರುಮಲ್ಲಪ್ಪ, ಶಿವಸ್ವಾಮಿ, ಶ್ರೀಕಂಠಪ್ಪ, ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net