132 ಕಾಮಗಾರಿಗಳಿಗೆ 2.5 ಕೋಟಿ ರೂ. ವೆಚ್ಚ

31 HANUR 2
Published on

ಹನೂರು: ಕಳೆದೊಂದು ವರ್ಷದಲ್ಲಿ ನರೇಗಾ ಯೋಜನೆಯಡಿ ದಿನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 132 ಕಾಮಗಾರಿಗಳು ನಡೆದಿದ್ದು, 2.5 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ ಎಂದು ಪಿಡಿಒ ಸುರೇಶ್ ತಿಳಿಸಿದರು.

ತಾಲೂಕಿನ ದಿನ್ನಳ್ಳಿ ಗ್ರಾಪಂ ವತಿಯಿಂದ ಶನಿವಾರ ಆಯೋಜಿಸಿದ್ದ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣಾ ಹಾಗೂ 15ನೇ ಹಣಕಾಸು ಯೋಜನೆಯ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ನರೇಗಾ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರಲ್ಲಿ ಪ್ರತಿ ಕುಟುಂಬವೂ ಉದ್ಯೋಗವನ್ನು ಪಡೆಯಬಹುದಾಗಿದೆ. ಈ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ, ಜಮೀನು, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಕೆರೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳವುದರ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು. ಸಮಸ್ಯೆಗಳಿದ್ದರೆ ಗ್ರಾಪಂ ಗಮನಕ್ಕೆ ತರಬೇಕು. ಪರಿಹಾರಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ಹೇಳಿದರು.

ನರೇಗಾ ತಾಲೂಕು ಸಂಯೋಜಕ ನಾರಾಯಣ ಮಾತನಾಡಿ, ಈ ಯೋಜನೆಯಡಿ ಗ್ರಾಪಂ ವತಿಯಿಂದ ಕಳೆದ ಒಂದು ವರ್ಷದಲ್ಲಿ ವಸತಿ ಯೋಜನೆಗೆ ಅನುದಾನ, ಕೃಷಿ ಹೊಂಡ, ದನದ ಕೊಟ್ಟಿಗೆ, ಸೇತುವೆ, ಚೆಕ್‌ಡ್ಯಾಂ ನಿರ್ಮಾಣ, ಕೆರೆ ಅಭಿವೃದ್ಧಿ, ಮೆಟ್ಲಿಂಗ್ ರಸ್ತೆ, ಸಿಸಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ಕೃಷಿ ಇಲಾಖೆ ವತಿಯಿಂದ 4 ಕಾಮಗಾರಿಗಳು ಸೇರಿದಂತೆ 132 ಕಾಮಗಾರಿಗಳು ನಡೆದಿದ್ದು, ಕೂಲಿ ವೆಚ್ಚ 1.38 ಕೋಟಿ ರೂ. ಹಾಗೂ ಸಾಮಗ್ರಿ ವೆಚ್ಚ 66.76 ಲಕ್ಷ ರೂ. ಸೇರಿದಂತೆ 2.5 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ. ಇದರಲ್ಲಿ ಆಕ್ಷೇಪಣೆಗಳಿದ್ದಲ್ಲಿ ಗ್ರಾಮಸ್ಥರು ಅರ್ಜಿ ಸಲ್ಲಿಸಬಹುದು ಎಂದರು.

ಬಳಿಕ ಸಭೆಯಲ್ಲಿ 15ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಖರ್ಚು ವೆಚ್ಚದ ಬಗ್ಗೆ ಮಾಹಿತಿ ತಿಳಿಸಲಾಯಿತು. ಸಭೆಯಲ್ಲಿ ನೋಡಲ್ ಅಧಿಕಾರಿ ಶಿಕ್ಷಣ ಸಂಯೋಜಕ ಅಶೋಕ್, ಗ್ರಾಪಂ ಅಧ್ಯಕ್ಷೆ ಪಾರ್ವತಿ ಬಾಯಿ, ಉಪಾಧ್ಯಕ್ಷ ರಾಮಕೃಷ್ಣ, ಸದಸ್ಯರಾದ ಅಬ್ದುಲ್ ನವಾಬ್, ಮರುಗೇಶ್, ಕೃಷ್ಣನಾಯ್ಕ, ಸಣ್ಣತಾಯಿ, ಸರೋಜಾಬಾಯಿ, ರತ್ನಬಾಯಿ, ಬಿಲ್ ಕಲೆಕ್ಟರ್ ಶ್ರೀನಿವಾಸ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net