

ಚಾಮರಾಜನಗರ: ಸಂವಿಧಾನ ಅಧ್ಯಯನ ಮಾಡುವುದರಿಂದ ಪ್ರತಿಯೊಬ್ಬರು ಉತ್ತಮ ಬದುಕು ಕಟ್ಟಿಕೊಳ್ಳುವ ಅವಕಾಶವಿದೆ ಎಂದು ಜಿಲ್ಲಾ ಅಬಕಾರಿ ಉಪಾಯುಕ್ತ ನಾಗಶಯನ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಹರವೆ ಗಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಜನಹಿತಾಶಕ್ತಿ ಹೋರಾಟ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಸಂವಿಧಾನವನ್ನು ಅಧ್ಯಯನ ಮಾಡಬೇಕು. ಸಂವಿಧಾನದಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಅನೇಕ ಅಂಶಗಳಿವೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಸಂವಿಧಾನದ ಅರಿವು ಅತ್ಯಂತ ಉಪಯುಕ್ತವಾಗಿದೆ ಎಂದರು.
ಭೋಗಾಪುರ ವಸತಿಯುಕ್ತ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಪಿ.ದೇವರಾಜು ಮಾತನಾಡಿ, ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ತಾಂಡವವಾಡುತ್ತಿದ್ದ ಜಾತಿವ್ಯವಸ್ಥೆ, ಅಸಮಾನತೆಯನ್ನು ಹೋಗಲಾಡಿಸಿ, ಸಮಸಮಾಜ ನಿರ್ಮಿಸಲು ಶ್ರಮಿಸಿದವರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಗ್ರಗಣ್ಯರಾಗಿದ್ದಾರೆ. ಸಂವಿಧಾನದ ಅರಿವು ಪಡೆದವರು ಸಮಾಜದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ. ದೇಶದಲ್ಲಿರುವ 145 ಕೋಟಿ ಜನರು ಒಂದಲ್ಲ, ಒಂದು ರೀತಿಯಲ್ಲಿ ಬದುಕು ಸಾಗಿಸಲು ಅಂಬೇಡ್ಕರ್ ಸಂವಿಧಾನ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಬಿ.ಮಹೇಶ್ ಹರವೆ, ದಲಿತ ಮುಖಂಡ ಮೂಡ್ನಾಕೂಡು ಪ್ರಕಾಶ್, ನಾಗೇಶ್, ಜಿಲ್ಲಾ ಜನಹಿತಾಶಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ಸಿದ್ದಾರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ರಂಗಸ್ವಾಮಿ, ಉಪನ್ಯಾಸಕ ನಾಗಮಲ್ಲಪ್ಪ, ಎಲ್.ಮಹದೇವಪ್ಪ, ರಂಗಸ್ವಾಮಿ, ನಾಗಮಲ್ಲಪ್ಪ, ಶಿವಕುಮಾರ್, ಸೌಗಂಧಿ, ಪ್ರತಿಭಾ ಇತರರು ಹಾಜರಿದ್ದರು.