ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹ

Published on

ಚಾಮರಾಜನಗರ: ಪರಿಶಿಷ್ಟ ಜಾತಿ, ಪಂಗಡಗಳಲ್ಲಿ ಒಳ ಮೀಸಲಾತಿಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ್ದು, ರಾಜ್ಯ ಸರ್ಕಾರ ತುರ್ತಾಗಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಸಾಮಾಜಿಕ ನ್ಯಾಯ ಪರ ವಕೀಲರ ವೇದಿಕೆಯ ಪದಾಧಿಕಾರಿ ಹಾಗೂ ಹಿರಿಯ ವಕೀಲ ಅರಣ್ ಕುಮಾರ್ ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಇವರೆಗೂ ಒಳಮೀಸಲಾತಿ ಪರವಾಗಿಲ್ಲ. ಆದರೇ ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಅವರು ನೀಡಿರುವ ಹೇಳಿಕೆ ನಮ್ಮಲ್ಲಿ ಆಶಾಭಾವನೆಯನ್ನು ಉಂಟುಮಾಡಿದೆ. ಈ ನಿಟ್ಟಿನಲ್ಲಿ ಅವರು ತುರ್ತಾಗಿ ಒಳ ಮೀಸಲಾತಿ ಸಂಬಂಧ ಕ್ಯಾಬಿನೆಟ್ ಒಪ್ಪಿಗೆ ಪಡೆದುಕೊಂಡು ಜಾರಿಗೊಳಿಸಬೇಕು. ಅಲ್ಲದೇ ಒಳ ಮೀಸಲಾತಿ ಜಾರಿಯಾಗುವ ತನಕ ಪರಿಶಿಷ್ಟ ಜಾತಿಯ ಯಾವುದೇ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬಾರದು. ಎಲ್ಲ ಕ್ಷೇತ್ರಗಳಲ್ಲೂ ಒಳ ಮೀಸಲಾತಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಬುಧವಾರದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದಲ್ಲಿ ಪರಿಶಿಷ್ಟ ಜನಾಂಗದ ಪಟ್ಟಿಯಲ್ಲಿ 101 ಜಾತಿಗಳಿವೆ. ಎಸ್ಸಿಗೆ ನೀಡಲಾಗುವ ಶೇ.15 ರಷ್ಟು ಮೀಸಲಾತಿಯನ್ನು ಜನಾಂಗದಲ್ಲಿರುವ ಬಲಾಡ್ಯರು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಎ.ಜೆ.ಸದಾಶಿವ ಆಯೋಗ 24 ಲಕ್ಷ ಕುಟುಂಬಗಳ ಸರ್ವೇ ಮಾಡಿದ್ದು, ಅವಕಾಶ ವಂಚಿತ ಸಮುದಾಯಗಳಿಗೆ ಪ್ರತಿನಿಧ್ಯ ದೊರೆಯಲು ಒಳ ಮೀಸಲಾತಿ ಕೊಡಬೇಕು ಎಂದು ವರದಿ ನೀಡಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದಾಶಿವ ಆಯೋಗದ ವರದಿಯನ್ನು ಸ್ವೀಕಾರ ಮಾಡಿದ್ದು ಎಸ್ಸಿ, ಎಸ್ಟಿಗೆ ಇದ್ದ ಶೇ.18 ರಷ್ಟು ಮೀಸಲಾತಿಯನ್ನು ಶೇ.24ಕ್ಕೆ ಏರಿಕೆ ಮಾಡಿತ್ತು ಎಂದರು.

ವಕೀಲ ಬೂದಿತಿಟ್ಟು ರಾಜೇಂದ್ರ ಮಾತನಾಡಿ, ಎಸ್ಸಿ, ಎಸ್ಟಿ ಜನಾಂಗಗಳಲ್ಲಿ ಒಳ ಮೀಸಲಾತಿ ವರ್ಗೀಕರಣ ಮಾಡಲು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿರುವುದು ಸ್ವಾಗತಾರ್ಹ. ಅವಕಾಶಗಳಿಂದ ವಂಚಿತವಾಗಿರುವ ಸಮುದಾಯಗಳಿಗೆ ಮೀಸಲಾತಿ ಹಂಚಿಕೆಯಾಗಬೇಕು. ಕೂಡಲೇ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಗೋಷ್ಟಿಯಲ್ಲಿ ವೇದಿಕೆಯ ದಾಸಯ್ಯ, ಟಿ.ಮುತ್ತುರಾಜು, ಸಿದ್ದಯ್ಯ, ಎಂ.ಮುತ್ತುರಾಜ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net