ರಾಜ್ಯಪಾಲರ ನಡೆ ರಾಜಕೀಯ ಪ್ರೇರಿತ

Published on

ಚಾಮರಾಜನಗರ : ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ರಾಜಕೀಯ ಪ್ರೇರಿತವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಬಾಲರಾಜ್ ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದೆ. ಪಂಚ ಗ್ಯಾರೆಂಟಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನರಲ್ಲಿ ಉತ್ತಮವಾದ ಅಭಿಪ್ರಾಯವಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡಲು ಹುನ್ನಾರ ನಡೆಸಲಾಗಿದೆ. ಬಿಜೆಪಿ ಸರ್ಕಾರ ಇದ್ದಾಗಲೇ ಬದಲೀ ನಿವೇಶನ ನೀಡಲಾಗಿದೆ, ಅದಾಗ್ಯೂ ವಿರೋಧ ಪಕ್ಷಗಳು ಗೊಂದಲ ಸೃಷ್ಟಿಸುವಂತಹ ಕೆಲಸ ಮಾಡುತ್ತಿದೆ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಬಿಜೆಪಿಯ ಮುರುಗೇಶ್ ನಿರಾಣಿ ಇನ್ನಿತರೆ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿ ಎಂದು ಸಾಂವಿಧಾನಿಕ ಸಂಸ್ಥೆಗಳು ಕೋರಿದ್ದರು ಪ್ರಾಸಿಕ್ಯೂಸನ್‌ಗೆ ಅನುಮತಿ ನೀಡದ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಅನುಮತಿ ನೀಡಿರುವುದು ಖಂಡನೀಯ. ರಾಜ್ಯಪಾಲರ ಈ ನಿರ್ಧಾರ ಆತುರದ ನಿರ್ಧಾರವಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಅದರಂತೆ ನಾವೆಲ್ಲರೂ ನಡೆಯುತ್ತೇವೆ. ಸಿದ್ದರಾಮಯ್ಯ ಅವರಿಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಲಿದ್ದೇವೆ ಎಂದು ಹೇಳಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆರೆಹಳ್ಳಿ ನವೀನ್, ಮುಖಂಡರಾದ ಶಿವಲಿಂಗೇಗೌಡ, ಗುರುಸ್ವಾಮಿ, ರಾಜಣ್ಣ, ಮರಿಸ್ವಾಮಿ, ಶಿವಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net