

ಚಾಮರಾಜನಗರ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಉದ್ಯೋಗಿನಿ ಯೋಜನೆಯಡಿ 2024-25ನೇ ಸಾಲಿಗೆ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರು ಸ್ವಯಂ ಉದ್ಯೋಗಿಗಳಾಗಲು ನೀಡಲಾಗುವ ಸಹಾಯಧನ ಹಾಗೂ ಬ್ಯಾಂಕ್ ಸಾಲಕ್ಕೆ ಅರ್ಜಿ ಆಹ್ವಾನಿಸಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಮಹಿಳೆಯರಿಗೆ ಸಾಲದ ಗರಿಷ್ಠ ಮಿತಿಯನ್ನು 1 ಲಕ್ಷ ರೂ. ಗಳಿಂದ 3 ಲಕ್ಷ ರೂ.ಗಳಿಗೆ ಸಹಾಯಧನದ ಮೊತ್ತವನ್ನು ಸಾಲದ ಮೊತ್ತದ ಶೇ. 50ರಷ್ಟಕ್ಕೆ ಹಾಗೂ ವಿಶೇಷ ವರ್ಗ ಮತ್ತು ಸಾಮಾನ್ಯ ವರ್ಗದ ಮಹಿಳೆಯರಿಗೆ ಸಾಲದ ಗರಿಷ್ಠ ಮಿತಿಯನ್ನು 1 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳಿಗೆ ಸಹಾಯಧನದ ಮೊತ್ತವನ್ನು ಸಾಲದ ಮೊತ್ತದ ಶೇ. 30ರಷ್ಟಕ್ಕೆ ನಿಗದಿಪಡಿಸಲಾಗಿದೆ. ಅರ್ಜಿದಾರರು 18 ರಿಂದ 55 ವರ್ಷ ವಯಸ್ಸಿನೊಳಗಿರಬೇಕು ಹಾಗೂ ಆಧಾರ್ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ.ಗಳು ಹಾಗೂ ವಿಶೇಷ ವರ್ಗ ಮತ್ತು ಸಾಮಾನ್ಯ ವರ್ಗದ ಮಹಿಳೆಯರ ಕುಟುಂಬದ ವಾರ್ಷಿಕ ಆದಾಯ 1.50 ಲಕ್ಷ ರೂ.ಗಳನ್ನು ಮೀರಿರಬಾರದು, ವಿಧವಾ ಪ್ರಮಾಣಪತ್ರ, ಅಂಗವಿಕಲ ಪ್ರಮಾಣಪತ್ರ, ಆದಾಯ ದೃಢೀಕರಣ ಪತ್ರ, ಜಾತಿ ದೃಢೀಕರಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರಗಳನ್ನು ಸಲ್ಲಿಸಬೇಕು.
ಬ್ಯಾಂಕಿನಿಂದ ಸಾಲ ಮಂಜೂರಾತಿ ಪತ್ರ ನೀಡಲು ಒಪ್ಪಿದ್ದಲ್ಲಿ ಸಹಾಯಧನ ಬಿಡುಗಡೆ ಮಾಡಲಾಗುವುದು. ಕೃಷಿ ಆಧಾರಿತ ಚಟುವಟಿಕೆಗಳಿಗೆ ಹಾಗೂ ಇತರೆ ಚಟುವಟಿಕೆಗಳಿಗೆ ಸಾಲ ನೀಡಲಾಗುವುದು. ಅರ್ಜಿದಾರರು ಸೌಲಭ್ಯ ಪಡೆಯಲು ಇಚ್ಚಿಸುವ ಸ್ವಯಂ ಉದ್ಯೋಗದಲ್ಲಿ ಸಾಕಷ್ಟು ಜ್ಞಾನ ಮತ್ತು ಅನುಭವ ಪಡೆದಿರಬೇಕು. ಯಾವುದೇ ಚಟುವಟಿಕೆಯಲ್ಲಿ ತರಬೇತಿ ಪಡೆದವರಿಗೆ ವಿಶೇಷ ಆದ್ಯತೆ ನೀಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ವಿಧವೆಯರು, ಸಂಕಷ್ಟಕ್ಕೊಳಗಾದ ಮಹಿಳೆಯರು ಹಾಗೂ ಅಂಗವಿಕಲ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ.
ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಆನ್‌ಲೈನ್‌ನಲ್ಲಿ ಸೆಪ್ಟೆಂಬರ್ 21ರೊಳಗೆ ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.